ಸರಕಾರ ಅಸ್ತಿರಗೊಳಿಸುವ ಬಿಜೆಪಿಯ ನಾಟಕ ವಿಫಲ : ಗುರುಶರಣ ಪಾಟೀಲ್
ಕಲಬುರಗಿ : ಸಚಿವ ಪ್ರಯಾಂಕ್ ಖರ್ಗೆ ರಾಜೀನಾಮೆ ಬೇಡಿಕೆ ಮುಂದಿಟ್ಟು ಬಿಜೆಪಿಗರು ರಾಜ್ಯ ಸರಕಾರವನ್ನು ಅಸ್ತಿರಗೊಳಿಸಲು ನಡೆಸಿದ ಬೀದಿ ನಾಟಕ ಸಂಪೂರ್ಣ ವಿಫಲವಾಗಿದೆ. ಇವರ ಹೋರಾಟಕ್ಕೆ ಜನರಿಂದ ಶೇರ್, ಕಮೆಂಟ್, ಲೈಕ್‌ಗಳೇ ಇಲ್ಲ ಎಂದು ಕೃಷಿಕ ಸಮಾಜ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಗುರುಶರಣ ಪಾಟೀಲ್ ಕೊರಳ್ಳಿ ಹೇಳಿದ್ದಾರೆ.
ಬುಧವಾರ ಅಳಂದದಲ್ಲಿ ಮಾತನಾಡಿದ ಅವರು, ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿಗರು, ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಅನಾವಶ್ಯಕವಾಗಿ ಎಳೆದು ಅವರ ರಾಜೀನಾಮೆ ಹಗಲುಗನಸು ಕಾಣುತ್ತಿದ್ದಾರೆ. ಸಚಿವರ ರಾಜೀನಾಮೆ ಕೇಳುತ್ತಿರುವುದು ಯಾವ ನೈತಿಕತೆಯ ಆಧಾರದ ಮೇಲೆ ಎಂದು ಪ್ರಶ್ನಿಸಿದರು.
ಖರ್ಗೆ ಅವರು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯಲ್ಲಿ ರಾಜ್ಯ ಅಷ್ಟೇಯಲ್ಲ. ರಾಷ್ಟ್ರಮಟ್ಟದಲ್ಲಿ ಮಾದರಿಯಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಬಿಜೆಪಿಗರು ಇಲ್ಲಸಲ್ಲದ ಕ್ಷುಲ್ಲಕ ರಾಜಕಾರಣ ಮಾಡಿ ರಾಜೀನಾಮೆ ಕೇಳುವುದು ನೋಡಿದರೆ, ಇವರಿಗೆ ಏನು ಕೆಲಸವಿಲ್ಲದ್ದರಿಂದಲೇ ಈ ರೀತಿ ಬೀದಿಗಿಳಿಯುತ್ತಿದ್ದಾರೆ. ತಮ್ಮದೇ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರಬೇಕಿರುವ ಅನುದಾನ ಮತ್ತು ಯೋಜನೆಗಳು ರಾಜ್ಯಕ್ಕೆ ತರುವಲ್ಲಿ ಶ್ರಮಿಸಿ ಅಭಿವೃದ್ಧಿ ವಿಷಯದಲ್ಲಿ ರಾಜ್ಯದ ಜನರ ಪರ ನಿಲ್ಲುವ ಕೆಲಸಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ರಾಜಶೇಖರ ಪಾಟೀಲ್ ಚಿತಲಿ, ಈರಣ್ಣಾ ಹೊನ್ನಶೆಟ್ಟಿ ಉಪಸ್ಥಿತರಿದ್ದರು.