ಕಲಬುರಗಿ | 12 ರೈತರಿಗೆ ದರಖಾಸ್ತು ಪೋಡಿ ವಿತರಣೆ ಮಾಡಿದ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್
ಕಲಬುರಗಿ : ಕಲಬುರಗಿ ತಾಲೂಕಿನ ತಾವರಗೇರಾ ಗ್ರಾಮದ 12 ಜನ ರೈತರಿಗೆ ಬುಧವಾರ ಹೊಸ ವರ್ಷದ ದಿನದಂದೇ ಕಲಬುರಗಿ ಜಿಲ್ಲಾಡಳಿತ ದರಖಾಸ್ತು ಪೋಡಿ ವಿತರಿಸುವ ಮೂಲಕ ನೂತನ ವರ್ಷದ ಗಿಫ್ಟ್ ನೀಡಿದೆ.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು, ತಾವರಗೇರಾ ಗ್ರಾಮದ 12 ರೈತರಿಗೆ ಒಟ್ಟಾರೆ 46.36 ಎಕರೆ ಜಮೀನಿನ ಪ್ರತ್ಯೇಕ ಪಹಣಿ ಪತ್ರಿಕೆ, ಫಾರ್ಮ್-10, ಆಕಾರ್ ಬಂದ್, ಸ್ಕೆಚ್ ನಕಾಶೆ ವಿತರಣೆ ಮಾಡಿದರು.
ತಾವರಗೇರಾದ ಗ್ರಾಮದ 50.36 ಎಕರೆ ಸರ್ಕಾರಿ ಗೈರಾಣಾ ಜಮೀನನ್ನು 1993-94ರ ಅವಧಿಯಲ್ಲಿ ಲ್ಯಾಂಡ್ ಗ್ರಾಂಟ್ ಕಮಿಟಿಯಿಂದ ರೈತರಿಗೆ ಉಳುಮೆ ಮಾಡಲು ಜಮೀನು ಮಂಜೂರು ಮಾಡಲಾಗಿತ್ತಾದರೂ, ಪ್ರತಿ ರೈತನಿಗೆ ಪ್ರತ್ಯೇಕ ಪಹಣಿ, ಹಿಸ್ಸಾ, ಪೋಡಿ ಇದೂವರೆಗೂ ಇರಲಿಲ್ಲ. ಒಟ್ಟಾಗಿ ಜಂಟಿ ಪಹಣಿ ಹೆಸರಿನಲ್ಲಿಯೇ ಅವರೆಲ್ಲರು ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಇತ್ತೀಚೆಗೆ ರಾಜ್ಯ ಸರ್ಕಾರ ತನ್ನ ಆಯವ್ಯಯದಲ್ಲಿ ಘೋಷಿಸಿದಂತೆ ಕಳೆದ ನ.25 ರಂದು ದರಖಾಸ್ತು ಪೋಡಿ ದುರಸ್ತಿಯ ಕಾರ್ಯವಿಧಾನಗಳಲ್ಲಿ ಸರಳೀಕರಣಗೊಳಿಸಿದ ಪರಿಣಾಮ ಇಂದಿಲ್ಲಿ ರೈತರು ತಮ್ಮ ಹೆಸರಿಗೆ ಪ್ರತ್ಯೇಕ ಪಹಣಿ ಪತ್ರಿಕೆ, ಫಾರ್ಮ್-10, ಆಕಾರ್ ಬಂದ್, ಸ್ಕೆಚ್ ನಕಾಶೆ ಪಡೆಯುವ ಭಾಗ್ಯ ದೊರೆಯಿತು. ಪ್ರಾಯೋಗಿಕವಾಗಿ ಹಾಸನ ಜಿಲ್ಲೆ ಹೊರತುಪಡಿಸಿದರೆ ನಾನ್ ಪೈಲಟ್ ಯೋಜನೆಯಡಿ ಕಲಬುರಗಿ ಜಿಲ್ಲೆಯ ತಾರಗೇರಾ ಗ್ರಾಮದ ರೈತರಿಗೆ ತಮ್ಮ ಜಮೀನಿನ ಹಕ್ಕಿನ ದಾಖಲೆಗಳು ಸಿಕ್ಕಂತಾಗಿದೆ. ಇದರಿಂದ ಮೂರು ದಶಕದ ಸಮಸ್ಯೆ ನಿವಾರಣೆಯಾಗಿ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಗ್ರಾಮದ ರೈತರಾದ ಶ್ಯಾಮರಾವ ದೇವಪ್ಪ ನಿಪ್ಪಾಣಿ, ಹಣಮಂತ ದೇವಪ್ಪ ನಿಪ್ಪಾಣಿ, ರಾಣಪ್ಪ ಕಾಶಪ್ಪ, ಮಲ್ಲಪ್ಪ ಗುಂಡಪ್ಪಾ, ಬಸಪ್ಪ ಮರಗಪ್ಪಾ, ಸುಭಾಷ್ಚಂದ್ರ ಮಲ್ಲಪ್ಪ, ನಾಗಪ್ಪ ಮಲ್ಲಪ್ಪಾ, ನಾಗಪ್ಪ ಸಂಬಣ್ಣಾ, ಬಂಡಪ್ಪಾ ಸಂಬಣ್ಣಾ, ಭೀಮಶ್ಯಾ ದೇವಪ್ಪಾ, ಸಂಬಣ್ಣಾ ನಾಗಪ್ಪ, ದಶರಥ ಕಾಶಪ್ಪಾ ಎಂಬುವರೇ ಪಹಣನಿತ್ಯಾದಿ ಪೋಡಿ ದಾಖಲೆಗಳು ಪಡೆದ ಭಾಗ್ಯವಂತರಾಗಿದ್ದಾರೆ.
ಜಿಲ್ಲೆಯಾದ್ಯಂತ ದರಖಾಸ್ತು ಪೋಡಿ ವಿತರಣೆಗೆ ಕ್ರಮ :
ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ರಾಜ್ಯ ಸರ್ಕಾರವು ದರಖಾಸ್ತು ಪೋಡಿ ವಿತರಣೆಗೆ ಸರಳೀಕರಣಗೊಳಿಸಿದ್ದರಿಂದ ಇಂದು ತಾವರಗೇರಾ ಗ್ರಾಮದ 12 ರೈತರಿಗೆ ಪೋಡಿ ದಾಖಲೆಗಳನ್ನು ವಿತರಣೆ ಮಾಡಲಾಗಿದೆ. ಇದಕ್ಕಾಗಿ ಶ್ರಮಿಸಿದ ತಾಲೂಕಿನ ಕಂದಾಯ, ಭೂಮಾಪನಾ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದ ಅವರು, ಜಿಲ್ಲೆಯಾದ್ಯಂತ ಇದೇ ರೀತಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರಿ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ :
ಪೋಡಿ ಪ್ರಮಾಣ ಪತ್ರ ಸ್ವೀಕರಿಸಿದ ರೈತ ರಾಣಪ್ಪ ಕಾಶಪ್ಪ ಮಾತನಾಡಿ, ಇದೂವರಗೆ ಪಹಣಿ ಜಂಟಿ ಖಾತೆಯಲ್ಲಿದ್ದರಿಂದ ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. 30 ವರ್ಷದ ಸಮಸ್ಯೆಗೆ ಈಗಿನ ಸರ್ಕಾರ ಪರಿಹಾರ ನೀಡಿದೆ. ಇದರಿಂದ ಸಾಲ-ಸೌಲಭ್ಯ ಪಡೆಯಲು ಸಹಾಯವಾಗಲಿದೆ. ಎಲ್ಲದಕ್ಕೂ ಮಿಗಿಲಾಗಿ ನಮ್ಮ ಹೆಸರಿಗೆ ಪ್ರತ್ಯೇಕ ಪಹಣಿ, ಹಿಸ್ಸಾ ದಾಖಲೆಗಳು ಬಂದಿದು ತುಂಬಾ ಸಂತೋಷವಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತರಾದ ಸಾಹಿತ್ಯ, ಪ್ರಭುರೆಡ್ಡಿ, ಕಲಬುರಗಿ ತಹಶೀಲ್ದಾರ ಕೆ.ಆನಂದಶೀಲ್, ಡಿ.ಡಿ.ಎಲ್.ಆರ್. ಶರಣಬಸ್ಸು, ಎ.ಡಿ.ಎಲ್.ಆರ್ ವೀರಣ್ಣ ಗಣಜಲಖೇಡ್ ಸೇರಿದಂತೆ ಇತರೆ ಕಂದಾಯ, ಭೂಮಾಪನಾ ಇಲಾಖೆಯ ಸಿಬ್ಬಂದಿಗಳು ಇದ್ದರು.