ಕಲಬುರಗಿ | ಭಾರತೀಯ ನ್ಯಾಯಾಂಗಕ್ಕೆ ವಿಜ್ಞಾನೇಶ್ವರರ ಕೊಡುಗೆ ಅವಿಸ್ಮರಣೀಯ : ಮುಡಬಿ ಗುಂಡೇರಾವ್
ಕಲಬುರಗಿ : ಶ್ರೇಷ್ಟ ನ್ಯಾಯಶಾಸ್ತ್ರಜ್ಞರಾದ ವಿಜ್ಞಾನೇಶ್ವರರು ದೇಶದ ಮೊದಲ ನ್ಯಾಯಶಾಸ್ತ್ರ ಗ್ರಂಥ ‘ಮಿತಾಕ್ಷರ’ವನ್ನು ನೀಡಿ ಮರತೂರನ್ನು ನ್ಯಾಯಶಾಸ್ತ್ರದ ಕಾಶಿಯನ್ನಾಗಿಸಿದ್ದಾರೆ. ತನ್ಮೂಲಕ ಕಲಬುರಗಿ ಜಿಲ್ಲೆ, ಕನ್ನಡ ನಾಡಿನ ಕೀರ್ತಿಯನ್ನು ದೇಶದಾದ್ಯಂತ ಪಸರಿಸುವ ಮೂಲ ಭಾರತೀಯ ನ್ಯಾಯಾಂಗಕ್ಕೆ ಅವಿಸ್ಮರಣೀಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ತಿಳಿಸಿದ್ದಾರೆ.
ಶಹಾಬಾದ್ ತಾಲೂಕಿನ ಮರತೂರ ಗ್ರಾಮದಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ʼಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-7ʼರಲ್ಲಿ ಅವರು ಮಾತನಾಡಿದರು.
ಮರತೂರ ಗ್ರಾಮ ಆಧ್ಯಾತ್ಮ, ಐತಿಹಾಸಿಕ ಸ್ಥಳಗಳು, ಅಪರೂಪದ ವಾಸ್ತುಶಿಲ್ಪಗಳು, ದೇವಾಲಯಗಳು, ವೀರಗಲ್ಲುಗಳನ್ನು ಹೊಂದಿದೆ. ಪ್ರಸ್ತುತವಾಗಿ ಕಾಶಿ ವಿಶ್ವನಾಥ, ಕಾಳಿಂಗೇಶ್ವರ, ಗುಬ್ಬಿನಾಥ, ಈಶ್ವರ ದೇವಾಲಯಗಳಿವೆ. ಇಲ್ಲಿ 360 ದೇವಾಲಯಗಳು, ಭಾವಿಗಳು ಇದ್ದವು ಎಂಬ ಐತಿಹ್ಯವಿದೆ. ನಮ್ಮ ಸ್ಥಳೀಯ ಇತಿಹಾಸ ತಿಳಿಯಬೇಕಾದರೆ ಇಲ್ಲಿನ ದೇವಾಲಯಗಳು, ಸ್ಮಾರಕಗಳನ್ನು ರಕ್ಷಣೆ ಮಾಡುವುದು ಅಗತ್ಯವಾಗಿದೆ ಎಂದರು.
ಮರತೂರನ ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ.ರವೀಂದ್ರ ಬಿ.ನರೋಣಿ ಮಾತನಾಡಿ, ನಮ್ಮ ಮರತೂರನ್ನು ವಿಜ್ಞಾನೇಶ್ವರರು ದೇಶಕ್ಕೆ ಮುಟ್ಟಿಸುವ ಕಾರ್ಯ ಮಾಡಿದ್ದಾರೆ. ಆಗಿನ ಕಾಲದಲ್ಲಿಯೇ ಇಲ್ಲಿ ಕಾಲುವೆ ವ್ಯವಸ್ಥೆಯಿತ್ತು. ಸಾಂಬಾರು ಪದಾರ್ಥಗಳು ಬೇರೆ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು ಎಂಬ ಶಾಸನದಲ್ಲಿ ಉಲ್ಲೇಖವಾಗಿರುವುದು ಗಮನಿಸಿದರೆ, ನಮ್ಮ ಪ್ರದೇಶ ಅಭಿವೃದ್ಧಿಯ ಮೂಲಕ ಮಾದರಿಯಾಗಿತ್ತು ಎಂದು ತಿಳಿದುಬರುತ್ತದೆ. ಭವ್ಯವಾದ ಇತಿಹಾಸ, ಪರಂಪರೆಯನ್ನು ಪಠ್ಯಕ್ಕೆ ಸೇರ್ಪಡೆಗೊಳಿಸಿ, ವಿದ್ಯಾರ್ಥಿ ದೆಸೆಯಿಂದಲೇ ಪರಿಚಯಿಸುವ ಕಾರ್ಯವಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಬಸವಪ್ರಭು ಜಿ.ಮುಡಬಿ, ಲಕ್ಷ್ಮೀಕಾಂತ್ ಮಡಿವಾಳ, ಬಸವರಾಜ ದುಗಣ್ಣ, ಶರಣು ಅಂಕಲಗಿ, ಶಾಮರಾಯ ಮಾಲಿಪಾಟೀಲ, ಮಲ್ಲಣ್ಣ ಅಣಕಲ್, ಶರಣಬಸಪ್ಪ ಪಟ್ಟೆದ್, ಸಂಗಣ್ಣ ಮೈನಾಳ, ನಾಗಣ್ಣ ರಾಯನಾಡ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.