ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ; ನ್ಯಾಯ ಸಿಗದಿದ್ದರೆ ಅಮಿತ್ ಶಾ, ಮೋದಿ ಅವರಿಗೆ ಪತ್ರ ಬರೆಯುತ್ತೇವೆ : ಸಚಿನ್ ಸಹೋದರಿ ಸುರೇಖಾ

Update: 2025-01-02 14:27 GMT

ಬೀದರ್ : ನನ್ನ ತಮ್ಮನ ಆತ್ಮಹತ್ಯೆ ನಡೆದು ಎಂಟು ದಿವಸ ಕಳೆಯುತ್ತಿದ್ದರೂ, ಯಾವುದೇ ರೀತಿಯ ತನಿಖೆ ನಡೆಯುತ್ತಿಲ್ಲ. ಈ ಎಂಟು ದಿವಸದಲ್ಲಿ ಏನಾದರೂ ಸಾಕ್ಷ್ಯ ನಾಶ ಮಾಡಬಹುದು ಎನ್ನುವ ಆತಂಕವಿದೆ. ಒಂದು ವೇಳೆ ನಮಗೆ ನ್ಯಾಯ ಸಿಗದಿದ್ದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತೇವೆ ಎಂದು ಆತ್ಮಹತ್ಯೆಗೆ ಶರಣಾದ ಸಚಿನ್ ಅವರ ಸಹೋದರಿ ಸುರೇಖಾ ಹೇಳಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆತ್ಮಹತ್ಯೆಯಾಗಿ ಎಂಟು ದಿವಸ ಕಳೆದರೂ ತನಿಖೆಯಾಗುತ್ತಿಲ್ಲ. ತನಿಖೆಯಲ್ಲಿ ವಿಳಂಬವಾಗುತ್ತಿದೆ. ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಎಂದು ಸರಕಾರಕ್ಕೆ ಕೇಳಿಕೊಂಡು ಸಾಕಾಗಿದೆ. ತನಿಖೆ ನಡೆಸುತ್ತಿದ್ದೇವೆ ಎಂದು ದಿನಗಳು ಮುಂದುಡುತ್ತಾ ಪ್ರಕರಣವನ್ನೇ ಮುಚ್ಚಿ ಹಾಕಬಹುದು ಎಂದು ಆರೋಪಿಸಿದರು.

ನಮ್ಮ ತಮ್ಮ ಗುತ್ತಿಗೆದಾರ ಹೌದೊ, ಇಲ್ವೋ ಎನ್ನುವ ಪ್ರಶ್ನೆ ಮಾಡಲಾಗುತ್ತಿದೆ. ಆದರೆ ನಮಗೂ ಕೂಡ ಅವನ ಕೆಲಸದ ಬಗ್ಗೆ ಸೂಕ್ತವಾದ ಮಾಹಿತಿ ಇಲ್ಲ. ಗುತ್ತಿಗೆದಾರರ ಅಸೋಷಿಯಷನ್ ಅವರು ಮನೆಗೆ ಬಂದು ಸಚಿನ್ ಅವರ ಗುತ್ತಿಗೆದಾರನ ಲೈಸೆನ್ಸ್ ಬಗ್ಗೆ ಕೇಳಿದರು. ಅವರಿಗೂ ಕೂಡ ಆತನ ಲೈಸೆನ್ಸ್ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದು ಹೇಳಿದ್ದೇವೆ. ಇವತ್ತು ಕೂಡ ಅದನ್ನೇ ಹೇಳುತ್ತಿದ್ದೇವೆ. ಸಚಿನ್ ಗುಲ್ಬರ್ಗದಲ್ಲಿಯೇ ಕೆಲಸ ಮಾಡುತಿದ್ದ. ಅಲ್ಲಿಯೇ ಕಚೇರಿ ಮಾಡಿದ್ದೀನಿ ಎಂದು ಹೇಳಿದ್ದ. ನಾವು ಯಾವತ್ತು ಆತನ ಕಚೇರಿಗೆ ಹೋಗಿ ಭೇಟಿ ನೀಡಲಿಲ್ಲ. ಆತನ ಎಲ್ಲ ದಾಖಲಾತಿಗಳು ಗುಲ್ಬರ್ಗಾದ ಕಚೇರಿಯಲ್ಲಿಯೇ ಇದ್ದವು. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಅವರು ಹೇಳಿದರು.

ಸಚಿನ್ ಅವರ ಖಾತೆಗೆ ದುಡ್ಡು ಜಮೆ ಮಾಡಲಾದ ವಿಷಯದ ಬಗ್ಗೆ ಮಾತನಾಡುತ್ತಾ, ಎಲ್ಲವನ್ನು ಸಚಿನ್ ಡೆತ್ ನೋಟ್ ನಲ್ಲಿ ಬರೆದಿದ್ದಾನೆ. ಆ ಹಣದ ಬಗ್ಗೆಯೂ ಮತ್ತು ಅವರ ಹೆಸರುಗಳು ಆ ಡೆತ್ ನೋಟ್ ನಲ್ಲಿ ದಾಖಲಿಸಿದ್ದಾನೆ. ಆ ಹಣದ ಬಗ್ಗೆ ನಮಗೇನೂ ಮಾಹಿತಿ ಇಲ್ಲ. ನಮ್ಮ ತಮ್ಮನ ಬ್ಯಾಂಕ್ ಖಾತೆಗಳು ನಾವಿನ್ನು ನೋಡಲಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಶ್ವಕರ್ಮ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವಿಜಯಕುಮಾರ್ ಪತ್ತಾರ್, ಜಿಲ್ಲಾಧ್ಯಕ್ಷ ಶ್ರೀನಿವಾಸ್, ದಾವಣಗೆರೆ ಜಿಲ್ಲಾಧ್ಯಕ್ಷ ಬಿ. ನಾಗೇಂದ್ರ ಆಚಾರ್ಯ, ವಿಭಾಗೀಯ ಮಟ್ಟದ ಅಧ್ಯಕ್ಷ ಹಾಗೂ ವಿಶ್ವಕರ್ಮ ಸಮಾಜ ಪೀಠ ದಾವಣಗೆರೆಯ ಆಡಳಿತ ಅಧ್ಯಕ್ಷ ಬಿ ಪಿ ಜಗನ್ನಾಥ್, ಕೊಟ್ರೇಶ್ ಆಚಾರ್ಯ ಹಾಗೂ ವಿಜಯ್ ಪಾಂಚಾಳ್ ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News