ಬಿಜೆಪಿ ಜೊತೆಗೆ ಜೆಡಿಎಸ್ ಹೊಂದಾಣಿಕೆ ಲೋಕಸಭಾ ಚುನಾವಣೆ ಹಿತದೃಷ್ಟಿಯಿಂದ ಮಾತ್ರ: ಶಾಸಕ ಜಿ.ಟಿ.ದೇವೇಗೌಡ

Update: 2024-02-07 12:44 GMT

ಮೈಸೂರು: ಬಿಜೆಪಿ ಜೊತೆಗೆ ಜೆಡಿಎಸ್‌ ಹೊಂದಾಣಿಕೆ ಲೋಕಸಭಾ ಚುನಾವಣಾ ಹಿತದೃಷ್ಟಿಯಿಂದ ಮಾತ್ರವಷ್ಟೆ. ಅದನ್ನು ಹೊರತು ಪಡಿಸಿ ನಮ್ಮ‌ ತತ್ವ ಸಿದ್ದಾಂತವೇ ಬೇರೆ ಬಿಜೆಪಿ ತತ್ವ ಸಿದ್ದಾಂತವೇ ಬೇರೆ ಎಂದು ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟನೆ ನೀಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಾ ಪಕ್ಷ ಕಟ್ಟಿದ ಜಯ ಪ್ರಕಾಶ್ ನಾರಾಯಣ್, ಪಕ್ಷ ಉಳಿಸಿ ಬೆಳೆಸಿದ ಎಚ್.ಡಿ ದೇವೇಗೌಡರ ಹಾದಿಯಲ್ಲಿ ನಾವು ಸಾಗುತ್ತೇವೆ. ಮೈತ್ರಿ ಮಾಡಿಕೊಂಡಿರುವ ಮಾತ್ರಕ್ಕೆ ನಮ್ಮ ತತ್ವ ಸಿದ್ಧಾಂತ ಒಂದಿಂಚು ಕೂಡ ಬದಲಾಗಲ್ಲ. ಬಿಜೆಪಿಯವರದು ಅವರಿಗೆ ನಮ್ಮದು ನಮಗೆ. ಕೇವಲ ಚುನಾವಣಾ ದೃಷ್ಟಿಯಿಂದ ಮಾತ್ರ ನಾವು ಒಂದಾಗಿದ್ದೇವೆ ಎಂದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇಸರಿ ಶಾಲು ಹಾಕಿದ ಬಗ್ಗೆ ಜೆಡಿಎಸ್‌ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಸmaಧಾನ ವ್ಯಕ್ತಪಡಿಸಿ ಬಹಿರಂಗವಾಗಿಯೇ ಆಕ್ಷೇಪಿಸಿದ್ದರು.

ಈ ಹಿನ್ನೆಲೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಜಿ.ಟಿ.ದೇವೇಗೌಡ ಸ್ಪಷ್ಟನೆ ನೀಡಿ, ಕುಮಾರಸ್ವಾಮಿ ಧರಿಸಿದ್ದ ಶಾಲು ಬಿಜೆಪಿಯವರದ್ದಲ್ಲ, ಆಂಜನೇಯನ ಭಕ್ತ ನೀಡಿದ ಶಾಲು. ಆದರೆ, ಕಾಂಗ್ರೆಸ್ ನವರು ಅದನ್ನೇ ದೊಡ್ಡದು ಮಾಡಿದ್ದಾರೆ ಅಷ್ಟೆ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಆಕ್ಷೇಪಕ್ಕೆ ಪರೋಕ್ಷ ಅಸಮ್ಮತಿ ವ್ಯಕ್ತಪಡಿಸಿದರು.

ಇಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾ.ಪಂ,ತಾಲೂಕು ಪಂಚಾಯತಿ ಮತ್ತು ಪಟ್ಟಣ ಪಂಚಾಯತಿ ಹಾಗೂ ನಗರಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲಿ ಮೂಲಭೂತ ಸಮಸ್ಯೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಜಿ.ಟಿ.ದೇವೇಗೌಡ, ಮುಂಬರುವ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ‌ ಸಮಸ್ಯೆ ಕುರಿತು ಗಂಭೀರವಾಗಿ ತಗೆದುಕೊಂಡು ಸಮಸ್ಯೆಗಳ ನಿವಾರಣೆಗೆ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಚರ್ಚಿಸಿದರು.

ನಮ್ಮ ರಾಜ್ಯದಿಂದಲೇ ಆಯ್ಕೆಯಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಂ ಅವರು ನಾವು ಎಲ್ಲವನ್ನೂ ಕೊಟ್ಟಿದ್ದೇವೆ ಎನ್ನುತ್ತಾರೆ. ಕಾಂಗ್ರೆಸ್ ನವರು ಕೊಟ್ಟಿಲ್ಲ ಎನ್ನುತ್ತಾರೆ. ಏನೇ ಇದ್ದರು ಕೂತು ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳಬಹುದಿತ್ತು. ಆದರೆ, ರಾಜ್ಯ ಸರ್ಕಾರ ಕೊಟ್ಟಿಲ್ಲ ಅಂತ ಹೇಳಿ ಪ್ರತಿಭಟನೆ ಮಾಡಲು ಮುಂದಾಗಿರುವುದು ಸರಿಯಲ್ಲ. ದೆಹಲಿಗೆ ಹೋಗಿ ಪ್ರತಿಭಟನೆ ಮಾಡುವ ಅಗತ್ಯ ಇರಲಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News