ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಪ್ರತಾಪ್ ಸಿಂಹ ಹೇಳಿಕೆಗೆ ಕಾಂಗ್ರೆಸ್‌‍ ಅಭ್ಯರ್ಥಿ ಎಂ. ಲಕ್ಷ್ಮಣ್‌ ತಿರುಗೇಟು

Update: 2024-03-28 18:41 GMT
ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಪ್ರತಾಪ್ ಸಿಂಹ ಹೇಳಿಕೆಗೆ ಕಾಂಗ್ರೆಸ್‌‍ ಅಭ್ಯರ್ಥಿ ಎಂ. ಲಕ್ಷ್ಮಣ್‌ ತಿರುಗೇಟು
  • whatsapp icon

ಮೈಸೂರು: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ. ಲಕ್ಷ್ಮಣ್‌ ಹೇಳಿದರು. ಚಾಮುಂಡಿಬೆಟ್ಟದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಕ್ಕೂ ಮುನ್ನ ಒಕ್ಕಲಿಗ ಜಾತಿ ಸರ್ಟಿಫಿಕೇಟ್‌ ಕೊಟ್ಟವರು ಯಾರೆಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು‌ ನೀಡಿದ್ದಾರೆ.

ಮೈಸೂರು ತಾಲೂಕು ತಹಸಿಲ್ದಾರ ಕೊಟ್ಟ ಒಕ್ಕಲಿಗ 3ಎ ಜಾತಿ ಪ್ರಮಾಣ ಪತ್ರವನ್ನು ಪ್ರದರ್ಶಿಸಿದ ಲಕ್ಷ್ಮಣ, ಜಾತಿಯನ್ನು ಯಾರೂ ಹಣೆಯ ಮೇಲೆ ಬರೆದುಕೊಳ್ಳುವುದಿಲ್ಲ ಎಂದರು.

ಚುನಾವಣೆ ರಂಗೇರಿದೆ. ಕಾಂಗ್ರೆಸ್‌‍ ಪರವಾಗಿ ಒಳ್ಳೆಯ ವಾತಾವರಣ ಸೃಷ್ಟಿಯಾಗುತ್ತಿದೆ. ಈಗ ಬಿಜೆಪಿಯವರು ಯಾವ ಹಂತಕ್ಕೆ ಬೇಕಾದರೂ ಹೋಗಲು ಸಿದ್ಧರಾಗಿದ್ದಾರೆ. ಯಾವ ಸುಳ್ಳನ್ನಾದರೂ ಹೇಳುತ್ತಾರೆ. ಒಕ್ಕಲಿಗ ಸಮುದಾಯ ಅಲ್ಲ ಅನ್ನುವುದಕ್ಕೆ ಏನಾದರೂ ದಾಖಲೆ ಸಲ್ಲಿಸಲಿ ಎಂದು ಒತ್ತಾಯಿಸಿದರು.

ಒಕ್ಕಲಿಗ ಸಮುದಾಯದ ತುಳಸಿದಾಸಪ್ಪ ಬಳಿಕ 47 ವರ್ಷಗಳ ನಂತರ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಒಕ್ಕಲಿಗ ಸಮಾಜಕ್ಕೆ ಟಿಕೆಟ್‌ ಕೊಟ್ಟಿದ್ದಾರೆ. ನಾನು ಯಾವುದೇ ಜಾತಿಗೆ ಸೀಮಿತ ಅಲ್ಲ. ಎಲ್ಲ ಜಾತಿಯ ಮತದಾರರು ಬೇಕು. ಪ್ರತಿಯೊಬ್ಬರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಮೈಸೂರು ಕೊಡಗು ಜಿಲ್ಲೆಗಳ ಒಕ್ಕಲಿಗರು 10 ವರ್ಷ ಪ್ರತಾಪ್ ಸಿಂಹಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನನಗೂ ಒಂದು ಅವಕಾಶ ಮಾಡಿಕೊಡಬೇಕು. 10 ವರ್ಷಗಳ ಕಾಲ ಮೈಸೂರು ಯಾವ ವ್ಯವಸ್ಥೆಯಲ್ಲಿತ್ತು? ಎಷ್ಟು ಹಾಳು ಮಾಡಿಕೊಂಡಿದ್ದೇವೆ ಆಲೋಚಿಸಬೇಕು ಎಂದರು.

ಗೆದ್ದು ಬಂದರೆ ಮೈಸೂರು -ಕೊಡಗು ಕ್ಷೇತ್ರವನ್ನು ಮಾದರಿಯಾಗಿ ರೂಪಿಸುತ್ತೇನೆ. ಪ್ರವಾಸೋದ್ಯಮ ಅಭಿವೃದ್ಧಿಪಡಿಸುತ್ತೇನೆ. ಐಟಿ ಸೆಕ್ಟರ್‌ ಉದ್ಯೋಗ ಅವಕಾಶ ಸೃಷ್ಟಿಸಲು ಅವಕಾಶ. ರಾಜ್ಯದಲ್ಲಿ 4 ವರ್ಷ ಕಾಂಗ್ರೆಸ್‌‍ ಸರ್ಕಾರ ಇರಲಿದ್ದು, ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಲು ಬದ್ಧನಾಗಿದ್ದೇನೆ ಎಂದು ತಿಳಿಸಿದರು.

ಬಿಜೆಪಿಯವರಂತೆ ನಾವು ಕೋಮು ಘರ್ಷಣೆ. ಜಾತಿ ಜಾತಿ ನಡುವೆ ತಂದಿಡುವ ಕೆಲಸ ಮಾಡುವುದಿಲ್ಲ. ಆ ಪ್ರವೃತ್ತಿ ಕಾಂಗ್ರೆಸ್‌‍ಗೆ ಇಲ್ಲ. ಬಿಜೆಪಿಯವರಂತೆ ಸುಳ್ಳು ಹೇಳದೇ ಜನರ ಪರವಾಗಿ ಕೆಲಸ ಮಾಡುತ್ತೇವೆ ಎಂದರು.

ನಗರ ಕಾಂಗ್ರೆಸ್‌‍ ಅಧ್ಯಕ್ಷ ಆರ್‌.ಮೂರ್ತಿ, ಜಿಲ್ಲಾ ಕಾಂಗ್ರೆಸ್‌‍ ಅಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್‌, ಮುಡಾ ಅಧ್ಯಕ್ಷ ಕೆ. ಮರಿಗೌಡ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌, ಮುಖಂಡರಾದ ಎಚ್‌.ವಿ. ರಾಜೀವ್‌, ಬಿ.ಎಂ. ರಾಮು, ಸೀತಾರಾಂ, ಭಾಸ್ಕರ್‌ ಎಲ್‌.ಗೌಡ, ಎನ್‌.ಆರ್‌. ನಾಗೇಶ್‌, ಸೇವಾದಳದ ಗಿರೀಶ್‌ ಮುಂತಾದವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News