ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಕುಮಾರಸ್ವಾಮಿ ರಾಜೀನಾಮೆ ಕೊಡುವರೇ?: ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ

ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಬಿಡುತ್ತಾರೆ, ಆದರೆ ಯಾವೆಲ್ಲ ಜನಪ್ರತಿನಿಧಿಗಳ ವಿರುದ್ಧಪ್ರಕರಣ ದಾಖಲಾಗಿದೆಯೋ ಅವರೆಲ್ಲರೂ ರಾಜೀನಾಮೆ ನೀಡಿ ವಿಧಾನ ಸೌಧದ ಮುಂದೆ ನಿಂತುಕೊಳ್ಳಿ ಎಂದು ಒತ್ತಾಯಿಸಿದ ಜಿ.ಟಿ.ದೇವೇಗೌಡ, ಪ್ರಕರಣ ಎದುರಿಸುತ್ತಿರುವ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ಕೊಡುವರೇ ಎಂದು ಪ್ರಶ್ನಿಸಿದರು.

Update: 2024-10-03 06:02 GMT

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜೀನಾಮೆ ಕೇಳುತ್ತಿರಲ್ವ, ತಾಕತ್ತಿದ್ದರೆ ರಾಜ್ಯದಲ್ಲಿ ಎಫ್.ಐ.ಆರ್. ದಾಖಲಾಗಿರುವ ಎಲ್ಲರೂ ರಾಜೀನಾಮೆ ನೀಡಿ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಸ್ವಪಕ್ಷದವರು ಸೇರಿದಂತೆ ಬಿಜೆಪಿ ನಾಯಕರುಗಳಿಗೆ ಸವಾಲು ಹಾಕಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಬಿಡುತ್ತಾರೆ, ಯಾರ ವಿರುದ್ಧವೆಲ್ಲ ಪ್ರಕರಣ ದಾಖಲಾಗಿಯೋ ಅವರೆಲ್ಲ ವಿಧಾನ ಸೌಧದ ಮುಂದೆ ನಿಂತುಕೊಂಡಿರಿ ಎಂದು ಒತ್ತಾಯಿಸಿದ ಜಿ.ಟಿ.ದೇವೇಗೌಡ, ಪ್ರಕರಣ ಎದುರಿಸುತ್ತಿರುವ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ಕೊಟ್ಟುಬಿಡುವರೇ ಎಂದು ಪ್ರಶ್ನಿಸಿದರು.

ಯಾಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು? ಅವರ ಮೇಲೆ ಎಫ್.ಐ.ಆರ್ ಆದಾ ಕ್ಷಣ ರಾಜೀನಾಮೆ ಕೊಡಬೇಕು ಎಂದು ಯಾವ ಕಾನೂನು ಹೇಳಿದೆ. ರಾಜ್ಯಪಾಲರು ತನಿಖೆ ಮಾಡುವಂತೆ ಹೇಳಿದ್ದಾರೆ. ನ್ಯಾಯಾಲಯ ಕೂಡ ಅದನ್ನು ಎತ್ತಿ ಹಿಡಿದಿದೆ. ಜೈಲಿಗೆ ಹಾಕಬೇಕು, ರಾಜೀನಾಮೆ ಕೊಡಬೇಕು ಎಂದು ನ್ಯಾಯಾಲಯ ಹೇಳಿದೆಯೇ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಜನರಿಗೆ ಸಾಕಷ್ಟು ಅನುಕೂಲವಾಗಿವೆ. ರಾಜ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಲು ಅವಕಾಶ ನೀಡದೆ ಬೆಳಗ್ಗೆ ಎದ್ದರೆ ರಾಜೀನಾಮೆ ಕೊಡಿ, ರಾಜೀನಾಮೆ ಕೊಡಿ ಎಂದು ಕೇಳುತ್ತೀರಲ್ಲ, ಯಾಕೆ ರಾಜೀನಾಮೆ ಕೊಡಬೇಕು, 2 ಲಕ್ಷ ಮತಗಳಿಂದ ಗೆದ್ದಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರನ್ನು ರಾಜೀನಾಮೆ ಕೇಳಿದರೆ ಕೊಡಲು ಆಗುತ್ತದೆಯೇ? 136 ಶಾಸಕರ ಬಲದ ಮೇಲೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ರಾಜೀನಾಮೆ ಕೊಡಲು ಆಗುತ್ತದೆಯೇ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯರಿಗೆ ಕಷ್ಟ ಬಂದಷ್ಟು ಗಟ್ಟಿಯಾಗುತ್ತಾರೆ. ತಾಯಿ ಚಾಮುಂಡೇಶ್ವರಿ ತಾಯಿ ಆಶೀರ್ವಾದ ಅವರಿಗೆ ಸದಾ ಇದ್ದೇ ಇರುತ್ತದೆ. 2006ರ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ನಾವು, ಬಿಜೆಪಿ ಪಕ್ಷದವರು ಇಬ್ಬರು ಸೇರಿಕೊಂಡು ಅವರನ್ನು ಸೋಲಿಸಲು ಪ್ರಯತ್ನಪಟ್ಟೆವು. ಆದರೆ ಅವರು ಸೋಲದೆ ಗೆದ್ದು ಬಂದರು. ಈಗಲೂ ಅವರು ಜಯಶಾಲಿಯಾಗುತ್ತಾರೆ ಎಂದು ಜಿಟಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News