ನಿತ್ಯಾನಂದ ಇರುವ ದ್ವೀಪಕ್ಕೆ ಹೋಗಲು ಪ್ರಜ್ವಲ್ ರೇವಣ್ಣ ಪ್ರಯತ್ನ: ಎಂ.ಲಕ್ಷ್ಮಣ್ ಆರೋಪ
ಮೈಸೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ ನನಗಿರುವ ಮಾಹಿತಿ ಪ್ರಕಾರ ನಿತ್ಯಾನಂದ ಇರುವ ದ್ವೀಪಕ್ಕೆ ಹೋಗಲು ಪ್ರಯತ್ನ ಪಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ ಮಾಡಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗಿರುವ ಮಾಹಿತಿ ಪ್ರಕಾರ ಪ್ರಜ್ವಲ್ ರೇವಣ್ಣ ಕೂಡ ನಿತ್ಯಾನಂದನ ಲಿಂಕ್ ಪಡೆದುಕೊಂಡು ಅವರು ಇರುವ ಜಾಗಕ್ಕೆ ಹೋಗಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿದಿನ ಪತ್ರಿಕಾಗೋಷ್ಠಿ ನಡೆಸಿ ಜನರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಿಂದ 15 ನೇ ತಾರೀಕು ಬರುತ್ತಾರೆ ಎಂದು ಇಂಟರ್ ಪೋಲ್ ಮಾಹಿತಿಯನ್ನು ಬಹಿರಂಗಪಡಿಸುತ್ತೀರಿ. ಯಾಕೆ ವಾಪಸ್ ಪ್ರಜ್ವಲ್ ರೇವಣ್ಣ ಬರುತ್ತಿಲ್ಲ ಎಂಬುದನ್ನು ತಿಳಿಸಿ ಎಂದು ಆಗ್ರಹಿಸಿದರು.
ವಕೀಲ ದೇವರಾಜೇಗೌಡ ಒಬ್ಬ ಕ್ರಿಮಿನಲ್ ಹಿನ್ನಲೆ ಇರುವ ವ್ಯಕ್ತಿ, ಈತ ಪೆನ್ ಡ್ರೈವ್ ಅನ್ನು ಕವರ್ ಒಳಗೆ ಸೀಲ್ ಮಾಡಿ ಇಟ್ಟಿದ್ದೆ ಎಂದ ಮೇಲೆ ಬೂದು ಕನ್ನಡಿ ಹಾಕಿ ಅಲ್ಲಿರುವುದನ್ನು ನೋಡಿ ಅಮಿತ್ ಶಾ, ವಿಜಯೇಂದ್ರ ಅವರಿಗೆ ಪತ್ರ ಬರೆದರೆ? ಈಗಲೂ ಎಸ್ಐಟಿ ಅವರಿಗೆ ಆಗ್ರಹ ಮಾಡುತ್ತೇನೆ ಕೂಡಲೇ ದೇವರಾಜೇ ಗೌಡ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದರು.
ದೇವರಾಜೇಗೌಡ ಸಂತ್ರಸ್ಥೆ ಮಹಿಳೆಯರಿಗೆ ಒಂದು ವರ್ಷದಿಂದ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಲು ಪ್ರಯತ್ನ ಪಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಬಗ್ಗೆ ಹೇಳಿಕೆ ಕೊಡಲು ಯಾರು ಸುಪಾರಿ ಕೊಟ್ಟಿದ್ದಾರೆ ಎಂಬುದು ಬಹಿರಂಗವಾಗಬೇಕು ಎಂದು ಹೇಳಿದರು.
ವಕೀಲ ದೇವರಾಜೇಗೌಡ ಕೋಟ್ ಧರಿಸಿ ವಕೀಲ ವೃತ್ತಿಗೆ ಅವಮಾನ ಮಾಡುತ್ತಿದ್ದಾರೆ. ಸಿಎಂ ಡಿಸಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾಗಿ ದೇವರಾಜೇಗೌಡ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು.