1200 ಕಾರುಗಳ ಮೆರವಣಿಗೆಯೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ ಕೇಂದ್ರ ಸಚಿವ ಸಿಂಧಿಯಾ ಆಪ್ತ ಸಮಂದರ್‌ ಪಟೇಲ್‌

Update: 2023-08-20 06:46 GMT

Photo:X/@AnshumanSail

ಭೋಪಾಲ್: ಆಡಳಿತಾರೂಢ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದು ಆರೋಪಿಸಿ, 2020ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಕಮಲ್ ನಾಥ್ ನೇತೃತ್ವದ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಮಧ್ಯಪ್ರದೇಶ ಶಾಸಕ ಸಮಂದರ್ ಪಟೇಲ್ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು indianexpress.com ವರದಿ ಮಾಡಿದೆ.

ತಮ್ಮ ಕ್ಷೇತ್ರ ಜವಾದ್ ನಿಂದ ಭೋಪಾಲ್ ಗೆ 1200 ಬೆಂಗಾವಲು ಕಾರುಗಳೊಂದಿಗೆ ತೆರಳಿದ ಪಟೇಲ್, ತಮ್ಮ ರಾಜಿನಾಮೆ ಪತ್ರವನ್ನು ಬಿಜೆಪಿ ಕಚೇರಿಗೆ ಸಲ್ಲಿಸಿದ್ದಾರೆ. ಕಳೆದ ಹಲವಾರು ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರಳಿರುವ ಸಿಂಧಿಯಾರ ಮೂರನೆಯ ನಿಷ್ಠ ಅನುಯಾಯಿ ಅವರಾಗಿದ್ದು, ಈ ಎಲ್ಲರೂ ಬೃಹತ್ ಕಾರು ರ್ಯಾಲಿ ನಡೆಸುವ ಮೂಲಕವೇ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.

ಇದಕ್ಕೂ ಮುನ್ನ ಜೂನ್ 14ರಂದು ಬಿಜೆಪಿ ನಾಯಕ ಬೈಜನಾಥ್ ಸಿಂಗ್ ಯಾದವ್ ಅವರು ಸಿಂಧಿಯಾರೊಂದಿಗಿನ ತಮ್ಮ ಸಂಬಂಧ ಕಡಿದುಕೊಂಡು, 700 ಕಾರುಗಳ ರ್ಯಾಲಿ ನಡೆಸಿದ್ದರು. ಜೂನ್ 26ರಂದು ಶಿವಪುರಿ ಜಿಲ್ಲೆಯ ಮಾಜಿ ಬಿಜೆಪಿ ಉಪಾಧ್ಯಕ್ಷ ರಾಕೇಶ್ ಕುಮಾರ್ ಗುಪ್ತಾ ಕೂಡಾ ಕಾರು ರ್ಯಾಲಿಯನ್ನು ಸಂಘಟಿಸುವ ಮೂಲಕ ಇದೇ ಹಾದಿ ತುಳಿದಿದ್ದರು.

ಈ ಕುರಿತು Indian Express ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಪಟೇಲ್, “ನಾನು ಮಹಾರಾಜ(ಸಿಂಧಿಯಾ)ರೊಂದಿಗೆ ಪಕ್ಷ ತೊರೆದೆ. ಆದರೆ, ಕೂಡಲೇ ನನಗೆ ಬಿಜೆಪಿಯೊಳಗೆ ಉಸಿರುಗಟ್ಟಿದ ಅನುಭವವಾಗತೊಡಗಿತು. ನನ್ನನ್ನು ಯಾವ ಕಾರ್ಯಕ್ರಮಗಳಿಗೂ ಆಹ್ವಾನಿಸುತ್ತಿರಲಿಲ್ಲ. ನನಗೆ ಗೌರವ ನೀಡಲಾಗುತ್ತಿರಲಿಲ್ಲ ಮತ್ತು ಅಧಿಕಾರ ಸ್ಥಾನವನ್ನು ನೀಡಿರಲಿಲ್ಲ” ಎಂದು ಆರೋಪಿಸಿದ್ದಾರೆ.

ಪಟೇಲರ ಶುಕ್ರವಾರದ ನಡೆಯು ಅವರು ಕಾಂಗ್ರೆಸ್ ನೆಡೆಗಿನ ಮರಳುತ್ತಿರುವ ಎರಡನೆ ಘಟನೆಯಾಗಿದೆ. ಇದಕ್ಕೂ ಮುನ್ನ ಅವರು 2018ರಲ್ಲಿ ವಿಧಾನಸಭಾ ಚುನಾವಣೆಯ ಟಿಕೆಟ್ ನಿರಾಕರಿಸಿದ್ದರಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಅವರು ಆ ಚುನಾವಣೆಯಲ್ಲಿ ತಮ್ಮ ಸ್ವತಂತ್ರ ಬಲದಿಂದ 35,000 ಮತಗಳನ್ನು ಪಡದಿದ್ದರು. ಇದರಿಂದ ಕಾಂಗ್ರೆಸ್ ಮತ ಗಳಿಕೆ ಕುಸಿದು, ಬಿಜೆಪಿ ಗೆಲುವಿಗೆ ದಾರಿಯಾಗಿತ್ತು. ಅವರು ಮತ್ತೆ 2019ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಸೇರ್ಪಡೆಯಾಗಿದ್ದರಾದರೂ, ಅದರ ಬೆನ್ನಿಗೇ ಮತ್ತೆ ಮಾರ್ಚ್, 2020ರಲ್ಲಿ ಸಿಂಧಿಯಾ ಗುಂಪಿನ 22 ಶಾಸಕರೊಂದಿಗೆ ಪಕ್ಷ ತೊರೆದಿದ್ದರು.

ಪಟೇಲ್ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ್ದ ನಾಯಕರಾಗಿದ್ದು, ಅವರು ಪ್ರತಿನಿಧಿಸುತ್ತಿರುವ ಜವಾದ್ ಕ್ಷೇತ್ರದಲ್ಲಿ ಇತರೆ ಹಿಂದುಳಿದ ವರ್ಗಗಳ ಶೇ. 24ರಷ್ಟು ಮತಗಳಿವೆ. ಅವರು ರಾಜ್ಯದಲ್ಲೇ ಅತ್ಯಂತ ಶ್ರೀಮಂತ ರಾಜಕೀಯ ನಾಯಕರ ಪೈಕಿ ಒಬ್ಬರಾಗಿದ್ದು, ತಮ್ಮ ಚುನಾವಣಾ ಪ್ರಮಾಣ ಪತ್ರದಲ್ಲಿ ರೂ. 89 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News