ಯುಎಪಿಎ ಅಡಿ 16 ಪತ್ರಕರ್ತರ ವಿರುದ್ಧ ಪ್ರಕರಣ, ಏಳು ಮಂದಿ ಈಗಲೂ ಜೈಲಿನಲ್ಲಿ; ವರದಿ

Update: 2023-10-07 12:23 GMT

ಸಾಂದರ್ಭಿಕ ಚಿತ್ರ (PTI) 

ಹೊಸದಿಲ್ಲಿ: ಕರಾಳ ಕಾನೂನುಗಳಡಿ ಆರೋಪಗಳನ್ನು ಹೊತ್ತಿರುವ ಪತ್ರಕರ್ತರ ಸಂಖ್ಯೆಯು ದೇಶದಲ್ಲಿ ವಾಕ್ ಸ್ವಾತಂತ್ರ್ಯದ ಅಪಾಯಕಾರಿ ಸ್ಥಿತಿಯನ್ನು ಸೂಚಿಸುತ್ತದೆ. ಭಾರತದಲ್ಲಿ 2010ರಿಂದ ಈವರೆಗೆ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ 16 ಪತ್ರಕರ್ತರ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ. ಈ ಪೈಕಿ ಎಂಟು ಪತ್ರಕರ್ತರು ಜಾಮೀನಿನಲ್ಲಿದ್ದರೆ, ಏಳು ಜನರು ಈಗಲೂ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ ಎಂದು wire.in ವರದಿ ಮಾಡಿದೆ.

ಹಲವಾರು ವಿಷಯಗಳ ಬಗ್ಗೆ ತನಿಖೆ ನಡೆಸಲು ಮತ್ತು ವರದಿ ಮಾಡಲು ಬಯಸುವ ಪತ್ರಕರ್ತರ ವಿರುದ್ಧ ಯುಎಪಿಎ ಅನ್ನು ಬಳಸಿದಾಗ ಅದು ಅವರ ಕಾನೂನುಬದ್ಧ ಕೆಲಸವನ್ನು ಅಪರಾಧೀಕರಿಸಲು ಮತ್ತು ಅವರನ್ನು ‘ಭಯೋತ್ಪಾದಕರು’ ಎಂದು ಕಳಂಕಿತಗೊಳಿಸಲು ಬಯಸುತ್ತದೆ ಹಾಗೂ ಇತರ ವೃತ್ತಿಪರರಲ್ಲಿ ಭೀತಿಯನ್ನು ಮೂಡಿಸುತ್ತದೆ.

ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕಲು ಯುಎಪಿಎ ಅನ್ನು ತರಲಾಗಿತ್ತು. ಆರೋಪಿಗಳಿಗೆ ಜಾಮೀನು ಸಿಗದಂತೆ ಮತ್ತು ಜೈಲುವಾಸವೇ ಗತಿಯಾಗಿರುವಂತೆ ಈ ಕಾಯ್ದೆಯ ದಂಡನೆ ಪ್ರಕ್ರಿಯೆಯನ್ನು ರೂಪಿಸಲಾಗಿದೆ. ಪ್ರಕರಣಗಳು ಅಕ್ಷರಶಃ ದಶಕಗಳ ಕಾಲ ಮುಂದುವರಿಯುತ್ತವೆ. ಯುಎಪಿಎ ಕುಣಿಕೆಯಿಂದ ಪಾರಾಗಲು ಇಬ್ಬರು ಸಫಲರಾಗಿದ್ದಾರೆ. ಓರ್ವರು ಖುಲಾಸೆಗೊಂಡಿದ್ದರೆ ಇನ್ನೋರ್ವರ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿತ್ತು. ಕಳೆದೊಂದು ದಶಕದಲ್ಲಿ ಯುಎಪಿಎ ಬತ್ತಳಿಕೆಯಲ್ಲಿ ದೇಶಭಕ್ತಿ, ರಾಷ್ಟ್ರೀಯ ಭದ್ರತೆ ಮತ್ತು ಆಪಾದಿತ ದೇಶವಿರೋಧಿ ಚಟುವಟಿಕೆಗಳನ್ನು ಸೇರಿಸಲಾಗಿದೆ. ಇತ್ತೀಚಿಗೆ ಸುದ್ದಿ ಜಾಲತಾಣ ನ್ಯೂಸ್‌ಕ್ಲಿಕ್‌ನ ಪ್ರಧಾನ ಸಂಪಾದಕ ಪ್ರಬೀರ ಪುರಕಾಯಸ್ಥ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರ ಬಂಧನವು ಇದಕ್ಕೆ ನಿದರ್ಶನವಾಗಿದೆ.

ಪುರಕಾಯಸ್ಥ ಮತ್ತು ಚಕ್ರವರ್ತಿ ಅವರ ವಿರುದ್ಧ ಕಲಂ 153ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಸೇರಿದಂತೆ ಯುಎಪಿಎದ ಹಲವು ಕಲಮ್‌ಗಳಡಿ ಆರೋಪಗಳನ್ನು ಹೊರಿಸಲಾಗಿದೆ. ಕಲಂ 153ಎ ಮಾಧ್ಯಮಗಳ ವಿರುದ್ಧ ಕಾನೂನು ಜಾರಿ ಸಂಸ್ಥೆಗಳ ನೆಚ್ಚಿನ ಅಸ್ತ್ರವಾಗಿದ್ದು, ನೇಹಾ ದೀಕ್ಷಿತ ಮತ್ತು ಪರಂಜಯ ಗುಹಾ ಠಾಕುರ್ತಾ ಸೇರಿದಂತೆ ಹಲವಾರು ಪತ್ರಕರ್ತರ ವಿರುದ್ಧ ಅದನ್ನು ಬಳಸಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಮಾನವ ಹಕ್ಕುಗಳ ಕಾರ್ಯಕರ್ತರು, ವಕೀಲರು,ವಿದ್ಯಾರ್ಥಿಗಳು,ಕಾರ್ಮಿಕರು ಮತ್ತು ಬುಡಕಟ್ಟು ಜನರ ವಿರುದ್ಧ ಆರೋಪಗಳನ್ನು ಹೊರಿಸಲು ಯುಎಪಿಎ ಅನ್ನು ಎಗ್ಗಿಲ್ಲದೆ ಬಳಸಲಾಗುತ್ತಿದ್ದರೆ, ಜಮ್ಮು-ಕಾಶ್ಮೀರದ ಸಾರ್ವಜನಿಕ ಭದ್ರತಾ ಕಾಯ್ದೆ,ಛತ್ತೀಸಗಡ ಜನ ಸುರಕ್ಷಾ ಅಧಿನಿಯಮ,ರಾಷ್ಟ್ರೀಯ ಭದ್ರತಾ ಕಾಯ್ದೆ ಮತ್ತು ಐಪಿಸಿಯಲ್ಲಿನ ದೇಶದ್ರೋಹದಂತಹ ನಿಬಂಧನೆಗಳನ್ನೂ ಬಳಸಲಾಗುತ್ತಿದೆ ಹಾಗೂ ಪತ್ರಕರ್ತರ ವಿರುದ್ಧ ಈ ಕಾಯ್ದೆಗಳಡಿಯೂ ಆರೋಪಗಳನ್ನು ಹೊರಿಸಲಾಗಿದೆ.

2010-2020ರ ನಡುವೆ ದೇಶದಲ್ಲಿ ಪತ್ರಕರ್ತರ ಬಂಧನದ ಕುರಿತು ಫ್ರೀ ಸ್ಪೀಚ್ ಕಲೆಕ್ಟಿವ್ ಅಧ್ಯಯನ ನಡೆಸಿದೆ. ಈ ಅವಧಿಯಲ್ಲಿ ತಮ್ಮ ವೃತ್ತಿಪರ ಕೆಲಸಕ್ಕಾಗಿ 154 ಪತ್ರಕರ್ತರನ್ನು ಬಂಧಿಸಲಾಗಿದೆ,ವಶಕ್ಕೆ ತೆಗೆದುಕೊಳ್ಳಲಾಗಿದೆ, ವಿಚಾರಣೆಗೊಳಪಡಿಸಲಾಗಿದೆ ಅಥವಾ ಶೋಕಾಸ್ ನೋಟಿಸ್‌ಗಳನ್ನು ನೀಡಲಾಗಿದೆ. ಈ ಪೈಕಿ ಶೇ.40ರಷ್ಟು ಪ್ರಕರಣಗಳು 2020ರಲ್ಲಿ ನಡೆದಿವೆ. ಒಂಭತ್ತು ವಿದೇಶಿ ಪತ್ರಕರ್ತರು ಗಡೀಪಾರು,ಬಂಧನ,ವಿಚಾರಣೆಗಳು ಅಥವಾ ಭಾರತದೊಳಗೆ ಪ್ರವೇಶ ನಿರಾಕರಣೆಯನ್ನು ಎದುರಿಸಿದ್ದರು.

ಪ್ರಜಾಪ್ರಭುತ್ವದಲ್ಲಿ ಪತ್ರಕರ್ತರು ಸುದ್ದಿ ಮತ್ತು ಮಾಹಿತಿಯ ಸಂದೇಶವಾಹಕರಾಗಿದ್ದಾರೆ. ಅವರನ್ನು ಮೌನಗೊಳಿಸುವುದು ಪ್ರಮುಖ ವಿಷಯಗಳ ಕುರಿತು ಅವರ ವರದಿಗಾರಿಕೆ ಮತ್ತು ವ್ಯಾಖ್ಯಾನವನ್ನು ಮೌನವಾಗಿಸುತ್ತದೆ ಹಾಗೂ ಯಾವುದೇ ಭೀತಿಯಿಲ್ಲದೆ ಮಾಹಿತಿಯನ್ನು ಪಡೆಯುವ ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಧಕ್ಕೆಯುಂಟಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News