2024ರ ಲೋಕಸಭಾ ಚುನಾವಣೆ: ಬಿಜೆಪಿ ನೇತೃತ್ವದ ಎನ್‌ಡಿಎ 350ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ: ಧರ್ಮೇಂದ್ರ ಪ್ರಧಾನ್

Update: 2023-09-24 17:17 GMT

Dharmendra Pradhan. (PTI)

ಭುವನೇಶ್ವರ: 2024ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 350ಕ್ಕೂ ಅಧಿಕ ಸ್ಥಾನಗಳನ್ನು ಪಡೆಯಲಿದೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ ಹೇಳಿದ್ದಾರೆ.

ಮುಂದಿನ ವರ್ಷ ಒಡಿಶಾದಲ್ಲಿ ಬಿಜೆಪಿಯು ಸರಕಾರವನ್ನು ರಚಿಸಲಿದೆ ಎಂದು ಅವರು ಪ್ರತಿಪಾದಿಸಿದರಾದರೂ,ಇಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವುದನ್ನು ಬಹಿರಂಗಗಳಿಸಲು ನಿರಾಕರಿಸಿದರು.

ಶನಿವಾರ ಇಲ್ಲಿ ಒಡಿಶಾ ಸಾಹಿತ್ಯೋತ್ಸವದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನ,ಎನ್‌ಡಿಎ 2024ರಲ್ಲಿ ತನ್ನ 25ನೇ ವರ್ಷವನ್ನು ಪೂರ್ಣಗೊಳಿಸಲಿದೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ 350ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂದರು.

ಬಿಜೆಪಿಯು ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಯಾವುದೇ ಘೋಷಣೆ ಮಾಡದೆ ಮಹಾರಾಷ್ಟ್ರ,ಹರ್ಯಾಣ ಮತ್ತು ಇತರ ಸ್ಥಳಗಳಲ್ಲಿ ಗೆಲುವು ಸಾಧಿಸಿದೆ. ಇದೇ ರೀತಿ ನಾವು ಒಡಿಶಾದಲ್ಲಿಯೂ ಚುನಾವಣೆಗಳನ್ನು ಗೆಲ್ಲುತ್ತೇವೆ ಎಂದರು. ಬಿಜೆಪಿಯ ಚುನಾವಣಾ ಕಾರ್ಯತಂತ್ರಗಳ ಹೆಚ್ಚಿನ ವಿವರಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗಗೊಳಿಸುವುದಿಲ್ಲ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಧಾನ,ವಿದೇಶಿ ವಿವಿಗಳನ್ನು ಭಾರತಕ್ಕೆ ಆಹ್ವಾನಿಸುವುದರಲ್ಲಿ ಯಾವುದೇ ತಪ್ಪಿಲ್ಲ. ನಮ್ಮ 10 ಲ.ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಗೆ ತೆರಳುತ್ತಾರೆ. ವಿದೇಶಿ ವಿವಿಗಳನ್ನು ಭಾರತಕ್ಕೆ ಆಹ್ವಾನಿಸುವಲ್ಲಿ ಯಾವುದೇ ಹಿಂಜರಿಕೆ ಇರಕೂಡದು ಎಂದರು.

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ)ವು ಶೀಘ್ರವೇ ವಿದೇಶಿ ವಿವಿ ನಿಯಂತ್ರಣ ನೀತಿಯನ್ನು ತರಲಿದೆ. ವಿದೇಶಿ ವಿವಿಗಳನ್ನು ಭಾರತಕ್ಕೆ ತರುವಲ್ಲಿ ನಮಗೆ ಯಾವುದೇ ಸಮಸ್ಯೆಗಳಿಲ್ಲ. ನಮ್ಮ ನಿಯಮಗಳು ಮತ್ತು ಷರತ್ತುಗಳ ಮೇಲೆ ವಿಶ್ವದ ಅತ್ಯುತ್ತಮ ವಿವಿಗಳನ್ನು ಭಾರತಕ್ಕೆ ತರಲು ನಾವು ಬಯಸಿದ್ದೇವೆ ಎಂದು ಹೇಳಿದ ಅವರು,ಭಾರತೀಯ ಶಿಕ್ಷಣ ಸಂಸ್ಥೆಗಳೂ ವಿದೇಶಗಳಲ್ಲಿ ತಮ್ಮ ಕ್ಯಾಂಪಸ್‌ಗಳನ್ನು ಸ್ಥಾಪಿಸುತ್ತಿವೆ ಎಂದು ಬೆಟ್ಟು ಮಾಡಿದರು.

ನಾವು ಭಾರತೀಯ ವಿದ್ಯಾರ್ಥಿಗಳನ್ನು ಜಾಗತಿಕ ತಂತ್ರಜ್ಞಾನ ಮಾಹಿತಿಯಿಂದ ವಂಚಿತರಾಗಿಸಬಾರದು. ಜ್ಞಾನವನ್ನು ಗಳಿಸುವ ವಿಷಯದಲ್ಲಿ ಯಾವುದೇ ತಾರತಮ್ಯವಿರಕೂಡದು ಎಂದೂ ಪ್ರಧಾನ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News