ಏರ್ ಇಂಡಿಯಾದ ಎಡವಟ್ಟು | ಜ್ಯೂರಿಚ್‌ನಲ್ಲಿ 24 ಗಂಟೆಗಳ ಕಾಲ ಗಡಿಪಾರುಗೊಂಡವರ ಸೆಲ್‌ನಲ್ಲಿ ಬಂಧಿಯಾಗಿದ್ದ ಕ್ಯಾಬಿನ್ ಸಿಬ್ಬಂದಿಗಳು!

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ವಿಮಾನ ಸಿಬ್ಬಂದಿಗಳಿಗೆ ವೀಸಾದ ಬದಲು ನೀಡಲಾಗುವ ಅಧಿಕೃತ ಸಿಬ್ಬಂದಿ ಸದಸ್ಯ ಪ್ರಮಾಣಪತ್ರವನ್ನು ಹೊಂದಿರದಿದ್ದ ಏರ್ ಇಂಡಿಯಾದ ಐವರು ಕ್ಯಾಬಿನ್ ಸಿಬ್ಬಂದಿಗಳನ್ನು ಇತ್ತೀಚಿಗೆ ಸ್ವಿಟ್ಝರ್‌ಲ್ಯಾಂಡ್‌ನ ರಾಜಧಾನಿ ಜ್ಯೂರಿಚ್‌ನ ವಿಮಾನ ನಿಲ್ದಾಣದಲ್ಲಿಯ ಗಡಿಪಾರುಗೊಂಡವರ ಸೆಲ್‌ನಲ್ಲಿ ನಿರ್ಬಂಧದಲ್ಲಿ ಇರಿಸಲಾಗಿತ್ತು.
24 ಗಂಟೆಗಳ ಕಾಲ ಅವರನ್ನು ಈ ಸೆಲ್‌ಗೆ ಸೀಮಿತವಾಗಿ ಇರಿಸಲಾಗಿತ್ತು ಮತ್ತು ಟಾಯ್ಲೆಟ್ ಬಳಸಲು ಮಾತ್ರ ಸೆಲ್‌ನಿಂದ ಹೊರಗೆ ಹೋಗಲು ಅವರಿಗೆ ಅನುಮತಿ ನೀಡಲಾಗಿತ್ತು. ಅವರು ಸ್ನಾನ ಸೌಲಭ್ಯಗಳು ಮತ್ತು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸುವುದನ್ನೂ ನಿಷೇಧಿಸಲಾಗಿತ್ತು.
ಈ ಸಿಬ್ಬಂದಿಗಳು ಅಧಿಕೃತವಾದ ಪ್ರಮಾಣ ಪತ್ರಗಳನ್ನು ಹೊಂದಿರಲಿಲ್ಲ ಎನ್ನಲಾಗಿದೆ. ಬಲ್ಲ ಮೂಲಗಳು ತಿಳಿಸಿರುವಂತೆ ಈ ಸಿಬ್ಬಂದಿಗಳು ವಿಸ್ತಾರ ಏರ್‌ಲೈನ್ಸ್ ಹೆಸರಿನಲ್ಲಿಯ ಪ್ರಮಾಣ ಪತ್ರಗಳನ್ನು ಹೊಂದಿದ್ದರು. ಆದರೆ ಅವರು ಏರ್ ಇಂಡಿಯಾದ ಉದ್ಯೋಗಿಗಳಾಗಿ ಪ್ರಯಾಣಿಸುತ್ತಿದ್ದರಿಂದ ಅದನ್ನು ಸ್ವೀಕರಿಸಲು ವಲಸೆ ಅಧಿಕಾರಿಗಳು ನಿರಾಕರಿಸಿದ್ದರು. ವಿಸ್ತಾರ 2024, ನ.12ರಂದು ಏರ್ ಇಂಡಿಯಾ ಜೊತೆ ವಿಲೀನಗೊಂಡಿತ್ತು.
ಅಧಿಕೃತ ಸಿಬ್ಬಂದಿ ಸದಸ್ಯ ಪ್ರಮಾಣಪತ್ರವು ವಿಮಾನಯಾನ ಸಂಸ್ಥೆಗಳ ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗಳ ಸುಗಮ ಚಲನವಲನಗಳಿಗಾಗಿ ಅಂತರರಾಷ್ಟ್ರೀಯ ನಾಗರಿಕ ವಾಯುಯಾನ ಸಂಘವು ನೀಡುವ ಗುರುತಿನ ಚೀಟಿಯಾಗಿದೆ.
ವಲಸೆ ಅಧಿಕಾರಿಗಳು ಅನುಮತಿ ನೀಡಿದ ಬಳಿಕ ಈ ಸಿಬ್ಬಂದಿಗಳು ಮರುದಿನ ಜ್ಯೂರಿಚ್‌ನಿಂದ ಮರಳಲಿದ್ದ ಯಾನಕ್ಕೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ವರದಿ ಮಾಡಿಕೊಂಡಿದ್ದರು. ವಿಮಾನಯಾನಕ್ಕೆ ಮುನ್ನ ತಪಾಸಣೆಗಳು, ಕ್ಯಾಬಿನ್ ಸುರಕ್ಷತೆ, ಪ್ರಯಾಣಿಕರನ್ನು ವಿಚಾರಿಸಿಕೊಳ್ಳುವುದು ಇತ್ಯಾದಿಗಳು ಕ್ಯಾಬಿನ್ ಸಿಬ್ಬಂದಿಗಳ ಕರ್ತವ್ಯಗಳಲ್ಲಿ ಸೇರಿವೆ.