ಇಮ್ರಾನ್ ಖಾನ್ ಪಕ್ಷದ ಥೀಮ್ ಸಾಂಗ್ ನಕಲು ಆರೋಪ: ಬಿಜೆಪಿ-ಕಾಂಗ್ರೆಸ್ ನಡುವೆ ವಾಕ್ಸಮರ
ಭೋಪಾಲ್: ಮಧ್ಯಪ್ರದೇಶದಲ್ಲಿ ಪಾಕಿಸ್ತಾನದ ಇಮ್ರಾನ್ ಖಾನ್ ನೇತೃತ್ವದ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಥೀಮ್ ಸಾಂಗ್ ಅನ್ನು ತಮ್ಮ ಪಕ್ಷಗಳ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ನಕಲು ಮಾಡಿದ ಆರೋಪ - ಪ್ರತ್ಯಾರೋಪವನ್ನು ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಮಾಡತೊಡಗಿವೆ ಎಂದು ndtv.com ವರದಿ ಮಾಡಿವೆ.
ಚುನಾವಣಾ ರಾಜ್ಯವಾದ ಮಧ್ಯಪ್ರದೇಶದಲ್ಲಿ ತನ್ನ ಮುಂಬರುವ ‘ಜನಾಕ್ರೋಶ ಯಾತ್ರೆ’ಗೆ ಪಾಕಿಸ್ತಾನದ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಥೀಮ್ ಸಾಂಗ್ ಅನ್ನು ಕಾಂಗ್ರೆಸ್ ನಕಲು ಮಾಡಿದೆ ಎಂದು ಆಡಳಿತಾರೂಢ ಬಿಜೆಪಿ ಪಕ್ಷವು ಆರೋಪಿಸಿದೆ.
ಇದಕ್ಕೆ ಪ್ರತಿಯಾಗಿ, ಪಾಕಿಸ್ತಾನ ಪಕ್ಷದ ಈ ಗೀತೆಯನ್ನು ಹರ್ಯಾಣ ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಆಗಿರುವ ದುಶ್ಯಂತ್ ಚೌಟಾಲ ನಕಲು ಮಾಡಿದ್ದರು. ಹಾಗೆಯೇ ಚುನಾವಣಾ ಪ್ರಚಾರಕ್ಕಾಗಿ ರಾಜಸ್ಥಾನದಲ್ಲಿ ಈ ಗೀತೆಯನ್ನು ಬಿಜೆಪಿ ಬಳಸಿಕೊಂಡಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ.
ಇತ್ತೀಚೆಗೆ ಕಾಂಗ್ರೆಸ್ ಪಕ್ಷವು ತನ್ನ ಜನಾಕ್ರೋಶ ಯಾತ್ರೆಯ ಭಾಗವಾಗಿ ‘ಚಲೋ, ಚಲೋ ಕಾಂಗ್ರೆಸ್ ಕೆ ಸಂಗ್ ಚಲೋ ಚಲೋ’ ಎಂಬ ಗೀತೆಯನ್ನು ಬಿಡುಗಡೆ ಮಾಡಿತ್ತು. ಈ ಗೀತೆಯನ್ನು ಉಲ್ಲೇಖಿಸಿದ್ದ ಮಧ್ಯಪ್ರದೇಶ ಬಿಜೆಪಿ ಘಟಕದ ಕಾರ್ಯದರ್ಶಿ ರಾಹುಲ್ ಕೊಠಾರಿ, ಪಾಕಿಸ್ತಾನದ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಗೀತೆಯನ್ನು ಕಾಂಗ್ರೆಸ್ ಪಕ್ಷವು ನಕಲು ಮಾಡಿದೆ ಎಂದು ಆರೋಪಿಸಿದ್ದರಿಂದ ಈ ವಿವಾದವು ಭುಗಿಲೆದ್ದಿತ್ತು.
ನವೆಂಬರ್ ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಪೂರ್ವಭಾವಿಯಾಗಿ 7 ಸ್ಥಳಗಳಲ್ಲಿ ನಾಳೆಯಿಂದ ಕಾಂಗ್ರೆಸ್ ಪಕ್ಷ ಜನಾಕ್ರೋಶ ಯಾತ್ರೆ ಆಯೋಜಿಸಿದೆ.