ವಿದೇಶಿ ಮಹಿಳೆಯ ಸಾಮೂಹಿಕ ಅತ್ಯಾಚಾರ: ಆಕ್ರೋಶದ ಬೆಂಕಿಗೆ ತುಪ್ಪ ಸುರಿದ ರಾಷ್ಟ್ರೀಯ ಮಹಿಳಾ ಆಯೋಗದ ಮುಖಸ್ಥೆಯ ಪ್ರತಿಕ್ರಿಯೆ

Update: 2024-03-04 13:17 GMT

NCW ಅಧ್ಯಕ್ಷೆ ರೇಖಾ ಶರ್ಮಾ. Photo: X/@NCWIndia.

ಹೊಸದಿಲ್ಲಿ,ಮಾ.4: ಜಾರ್ಖಂಡ್ ನಲ್ಲಿ ಸ್ಪೇನ್ ನ ಪ್ರವಾಸಿ ದಂಪತಿಗೆ ಹಲ್ಲೆ ಮತ್ತು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ಲೇಖಕನಿಗೆ ರಾಷ್ಟ್ರೀಯ ಮಹಿಳಾ ಆಯೋಗ (NCW)ದ ಅಧ್ಯಕ್ಷೆ ರೇಖಾ ಶರ್ಮಾ ಅವರು ನೀಡಿರುವ ಉತ್ತರ ಅಂತರ್ಜಾಲದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಭಾರತ ಪ್ರವಾಸವನ್ನು ಕೈಗೊಂಡಿರುವ ಜನಪ್ರಿಯ ಟ್ರಾವೆಲ್ ವ್ಲಾಗರ್ ದಂಪತಿ ಇತ್ತೀಚಿಗೆ ಜಾರ್ಖಂಡ್ ನ ದುಮ್ಕಾ ಅರಣ್ಯ ಪ್ರದೇಶದ ಮೂಲಕ ಸಾಗುತ್ತಿದ್ದಾಗ ದುಷ್ಕರ್ಮಿಗಳ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತ್ತು. ಪತಿಯನ್ನು ಥಳಿಸಿ ಜೀವ ಬೆದರಿಕೆಯನ್ನೊಡ್ಡಿದ್ದ ಗುಂಪಿನಲ್ಲಿಯ ಏಳು ಜನರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವನ್ನು ನಡೆಸಿದ್ದರು. ದಂಪತಿ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ತಮಗಾದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದರು.

ಈ ಘಟನೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಹಲವರು ಭಾರತದಲ್ಲಿಯ ಕೆಲವು ಪ್ರದೇಶಗಳು ಮಹಿಳೆಯರ ಪ್ರವಾಸಕ್ಕೆ ಸುರಕ್ಷಿತವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಈ ಪೈಕಿ ಲೇಖಕ ಡೇವಿಡ್ ಜೋಸೆಫ್ ವೊಲೊರ್ಕೊ ಹಲವಾರು ವರ್ಷಗಳ ಕಾಲ ತಾನು ಭಾರತದಲ್ಲಿ ವಾಸವಾಗಿದ್ದಾಗ ಕಂಡಿದ್ದ ‘ಲೈಂಗಿಕ ಆಕ್ರಮಣದ ಮಟ್ಟ’ವನ್ನು ತಾನು ಭೇಟಿ ನೀಡಿದ್ದ ಇತರ ಯಾವುದೇ ದೇಶದಲ್ಲಿಯೂ ನೋಡಿರಲಿಲ್ಲ ಎಂದು ಬೆಟ್ಟು ಮಾಡಿದ್ದರು.

ತನ್ನ ಎಕ್ಸ್ ಪೋಸ್ಟ್ ನಲ್ಲಿ ತಾನು ಕಣ್ಣಾರೆ ಕಂಡಿದ್ದ, ವಿದೇಶಿ ಮಹಿಳೆಯರು ಭಾರತದಲ್ಲಿ ಲೈಂಗಿಕ ಕಿರುಕುಳವನ್ನು ಅನುಭವಿಸಿದ್ದ ಕೆಲವು ನಿದರ್ಶನಗಳನ್ನು ಉಲ್ಲೇಖಿಸಿದ್ದ ಡೇವಿಡ್, ‘ಭಾರತದಲ್ಲಿ ನಾನು ಭೇಟಿಯಾಗಿದ್ದ ಮಹಿಳಾ ಪ್ರವಾಸಿಗಳೆಲ್ಲ ಒಂದಲ್ಲ ಒಂದು ರೀತಿಯ ಲೈಂಗಿಕ ಕಿರುಕುಳ, ಹಲ್ಲೆಗಳನ್ನು ಎದುರಿಸಿದವರೇ ಆಗಿದ್ದರು. ನಾನು ಭಾರತವನ್ನು ಪ್ರೀತಿಸುತ್ತೇನೆ. ಅದು ಯಾವಾಗಲೂ ವಿಶ್ವದಲ್ಲಿಯ ನನ್ನ ನೆಚ್ಚಿನ ಸ್ಥಳಗಳಲ್ಲೊಂದಾಗಿರುತ್ತದೆ. ಆದರೆ ಭಾರತಕ್ಕೆ ಎಂದೂ ಒಂಟಿಯಾಗಿ ಪ್ರವಾಸ ಕೈಗೊಳ್ಳದಂತೆ ನಾನು ನನ್ನ ಸ್ನೇಹಿತೆಯರಿಗೆ ಸಲಹೆ ನೀಡಿದ್ದೇನೆ. ಇದು ಭಾರತೀಯ ಸಮಾಜದಲ್ಲಿಯ ನಿಜವಾದ ಸಮಸ್ಯೆಯಾಗಿದ್ದು, ಈ ಬಗ್ಗೆ ಹೆಚ್ಚಿನ ಗಮನವನ್ನು ಹರಿಸುವ ಅಗತ್ಯವಿದೆ. ಪರಿಸ್ಥಿತಿ ಕ್ರಮೇಣ ಸುಧಾರಿಸುತ್ತದೆ ಎಂದು ನಾನು ಆಶಿಸಿದ್ದೇನೆ’ ಎಂದು ಬರೆದಿದ್ದರು.

ಈ ಪೋಸ್ಟ್ ಗೆ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕೆಲವರು ಸಹಮತ ವ್ಯಕ್ತಪಡಿಸಿದರೆ ಅನೇಕರು ಡೇವಿಡ್ ವಿರುದ್ಧ ತೀವ್ರ ದಾಳಿಯನ್ನು ನಡೆಸಿದ್ದಾರೆ. ಹೀಗೆ ದಾಳಿ ನಡೆಸಿದವರಲ್ಲಿ NCW ಅಧ್ಯಕ್ಷೆ ರೇಖಾ ಶರ್ಮಾ ಒಬ್ಬರಾಗಿದ್ದು, ಮಹಿಳೆಯರ ಸುರಕ್ಷತೆಯ ವಿಷಯವನ್ನು ದೇಶದ ಮಾನಹಾನಿಯೊಂದಿಗೆ ಸಮೀಕರಿಸಿದ್ದಾರೆ.

‘ನೀವು ಭಾರತದಲ್ಲಿ ವಿದೇಶಿ ಮಹಿಳೆಯರಿಗೆ ಲೈಂಗಿಕ ಕಿರುಕುಳದ ಘಟನೆಗಳನ್ನು ಉಲ್ಲೇಖಿಸಿದ್ದೀರಿ. ಘಟನೆಯ ಬಗ್ಗೆ ಎಂದಾದರೂ ಪೋಲಿಸರಿಗೆ ದೂರು ಸಲ್ಲಿಸಿದ್ದೀರಾ? ಇಲ್ಲ ಎಂದಾದರೆ ನೀವು ಸಂಪೂರ್ಣವಾಗಿ ಹೊಣೆಗೇಡಿ ವ್ಯಕ್ತಿಯಾಗಿದ್ದೀರಿ. ಕೇವಲ ಸಾಮಾಜಿಕ ಮಾಧ್ಯಮಗಳಲ್ಲಿ ಬರೆಯುವುದು ಮತ್ತು ಇಡೀ ದೇಶದ ಮಾನ ಕಳೆಯುವುದು ಉತ್ತಮ ಆಯ್ಕೆಯಲ್ಲ’ ಎಂದು ಶರ್ಮಾ ಡೇವಿಡ್ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದಾರೆ.

NCW ಕೇಂದ್ರ ಸರಕಾರದ ಅಡಿ ಶಾಸನಬದ್ಧ ಸಂಸ್ಥೆಯಾಗಿದೆ ಮತ್ತು ಮಹಿಳೆಯರ ಬಗ್ಗೆ ಕಾಳಜಿಯನ್ನು ವಹಿಸುವ ಅತ್ಯುನ್ನತ ಗುಂಪುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಆದರೆ NCW ಇತ್ತೀಚಿಗೆ ತಪ್ಪು ಕಾರಣಗಳಿಂದ ಸುದ್ದಿಯಾಗುತ್ತಿದೆ. ಉದಾಹರಣೆಗೆ ಕಳೆದ ವರ್ಷದ ಮೇ 4ರಂದು ಮಣಿಪುರದಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರ ಮೇಲೆ ಗುಂಪೊಂದು ನಡೆಸಿದ್ದ ಲೈಂಗಿಕ ದೌರ್ಜನ್ಯ ಕುರಿತು ದೂರಿಗೆ ಆಯೋಗವು ಸ್ಪಂದಿಸಿರಲಿಲ್ಲ. ತಮಗೆ ಲೈಂಗಿಕ ಕಿರುಕುಳ ನೀಡಿದ್ದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೇಶದ ಅಗ್ರ ಮಹಿಳಾ ಕುಸ್ತಿಪಟುಗಳು ಸಲ್ಲಿಸಿದ್ದ ದೂರು ಕೂಡ ನಿಷ್ಫಲಗೊಂಡಿತ್ತು.

ಶರ್ಮಾ ಅವರಿಗೆ ಉತ್ತರಿಸಿರುವ ಡೇವಿಡ್, “ನಾನು ಭಾರತದ ಮಾನಹಾನಿಯನ್ನು ಮಾಡಿಲ್ಲ, ನಾನು ಪ್ರೀತಿಸಿದ್ದ ದೇಶದಲ್ಲಿನ ದೋಷವನ್ನು ಬೆಟ್ಟು ಮಾಡಲು ಪ್ರಯತ್ನಿಸಿದ್ದೆ” ಎಂದಿದ್ದಾರೆ.ಎನ್ಸಿಡಬ್ಲ್ಯು ವಿರುದ್ಧ ಟೀಕಾಪ್ರಹಾರ ನಡೆಸಿರುವ ಅವರು, ‘ನನ್ನ ಅನೇಕ ಭಾರತೀಯ ಸ್ನೇಹಿತರಿಗೆ ಈ ಆಯೋಗದ ಬಗ್ಗೆ ಸದಭಿಪ್ರಾಯವಿಲ್ಲ. ಸಂತ್ರಸ್ತ ಮಹಿಳೆಯರನ್ನೇ ದೂಷಿಸುವ ವಿಷಾದನೀಯ ಪ್ರವೃತ್ತಿಯನ್ನು ಅದು ಹೊಂದಿದೆ. ಹೀಗೆ ಮಾಡುವ ಮೂಲಕ ಅದು ಭಾರತವನ್ನು ಮಹಿಳೆಯರಿಗೆ ಕಡಿಮೆ ಸುರಕ್ಷಿತವನ್ನಾಗಿ ಮಾಡುತ್ತಿದೆ’ ಎಂದು ಕುಟುಕಿದ್ದಾರೆ.

ಇತರ ಅನೇಕರು, ಹೆಚ್ಚಾಗಿ ಮಹಿಳೆಯರು ಶರ್ಮಾರ ಉತ್ತರ ತಮ್ಮನ್ನು ದಿಗಿಲುಗೊಳಿಸಿದೆ ಎಂದಿದ್ದಾರೆ. ಭಾರತದಲ್ಲಿ ತಮ್ಮ ಬದುಕುಗಳಲ್ಲಿ ತಾವು ಪ್ರತಿನಿತ್ಯವೂ ಎನ್ನುವಂತೆ ಎದುರಿಸುತ್ತಿರುವ ಭಯಾನಕತೆಗಳನ್ನು ಅವರು ಮೆಲುಕು ಹಾಕಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News