FACT CHECK| ‘ಮೋದಿ ದೇಶದ್ರೋಹಿ’ ಭಾಗವನ್ನು ಕೈಬಿಟ್ಟು ವೈಕೋ ಹೇಳಿಕೆಯನ್ನು ಪ್ರಸಾರಿಸಿದ ANI

Update: 2024-04-04 12:21 GMT

Screengrab:X/@ANI

ಹೊಸದಿಲ್ಲಿ: ತಮಿಳುನಾಡಿನ ಎಂಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ವೈಯಾಪುರಿ ಗೋಪಾಲಸ್ವಾಮಿ ಅಲಿಯಾಸ್ ವೈಕೋ ಬುಧವಾರ ಶ್ರೀಲಂಕಾದಲ್ಲಿನ ಕಛತೀವು ದ್ವೀಪದ ಸುತ್ತ ಹುಟ್ಟಿಕೊಂಡಿರುವ ವಿವಾದದ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ ನೀಡಿದ್ದ ಹೇಳಿಕೆಯ ವೀಡಿಯೊವನ್ನು‘ಎಡಿಟ್’ಮಾಡಿ ಸುದ್ದಿಸಂಸ್ಥೆ ಎಎನ್‌ಐ ‘ಟ್ವೀಟಿಸಿದ್ದು, ಇದನ್ನು ಆಧರಿಸಿ ಮಾಧ್ಯಮ ಸಂಸ್ಥೆಗಳು ತಪ್ಪುದಾರಿಗೆಳೆಯುವ ವರದಿಗಳನ್ನು ಪ್ರಕಟಿಸಿವೆ. ಎಂಡಿಎಂಕೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಡಿಎಂಕೆಯ ಮಿತ್ರಪಕ್ಷವಾಗಿದೆ.

ಕಛತೀವು ತಮಿಳುನಾಡಿನ ರಾಮೇಶ್ವರಮ್‌ನ ಈಶಾನ್ಯ ಮತ್ತು ಶ್ರೀಲಂಕಾದ ಜಾಫ್ನಾದ ನೈರುತ್ಯದಲ್ಲಿರುವ ಜನವಸತಿಯಿಲ್ಲದ ದ್ವೀಪವಾಗಿದೆ. 1974ರಲ್ಲಿ ಭಾರತವು ಈ ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿತ್ತು ಮತ್ತು ನಂತರ ಶ್ರೀಲಂಕಾ ಈ ದ್ವೀಪದ ಸುತ್ತುಮುತ್ತ ಮೀನುಗಾರಿಕೆ ನಡೆಸುವ ಹಕ್ಕುಗಳನ್ನು ತ್ಯಜಿಸಿತ್ತು. ಈ ವಿಷಯಕ್ಕೆ ಸಂಬಂಧಿಸಿದ ಸರಕಾರದ ಚರ್ಚೆಗಳ ವಿವರಗಳನ್ನು ಬಿಜೆಪಿ ಬಹಿರಂಗಗೊಳಿಸಿದ ಬಳಿಕ ವಿವಾದವು ಮತ್ತೆ ಹೆಡೆಯೆತ್ತಿದೆ. ಆಗಿನ ಸರಕಾರವು ಅಸಡ್ಡೆಯಿಂದ ಈ ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರೆ, ಬಿಜೆಪಿಯು ಮುಂಬರುವ ಚುನಾವಣೆಗಳಲ್ಲಿ ಮತಗಳಿಕೆಗಾಗಿ ಈ ಸೂಕ್ಷ್ಮವಿಷಯವನ್ನು ಬಳಸಿಕೊಳ್ಳುತ್ತಿದೆ ಎಂದು ಪ್ರತಿಪಕ್ಷ ನಾಯಕರು ಆಪಾದಿಸಿದ್ದಾರೆ.

ವಿವಾದಕ್ಕೆ ಸಂಬಂಧಿಸಿದಂತೆ ಎಎನ್‌ಐ ಎ.3ರಂದು ಸುದ್ದಿಗಾರರೊಂದಿಗೆ ವೈಕೋ ಅವರ ಸಂವಾದದ 10 ಸೆಕೆಂಡ್‌ಗಳ ತುಣುಕನ್ನು ಟ್ವೀಟ್ ಮಾಡಿತ್ತು. ‘ಕಾಂಗ್ರೆಸ್ ಆ ಸಮಯದಲ್ಲಿ ಪ್ರತಿ ರಂಗದಲ್ಲಿಯೂ ತಮಿಳುನಾಡಿಗೆ ದ್ರೋಹವೆಸಗಿತ್ತು’ ಎಂದು ವೈಕೋ ಹೇಳಿದ್ದು ಈ ವೀಡಿಯೊ ತುಣುಕಿನಲ್ಲಿದೆ.

ಎಎನ್‌ಐ ಟ್ವೀಟ್‌ನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು,‌ ವೀಡಿಯೊವನ್ನು ಆಲಿಸುವಂತೆ ತಮಿಳುನಾಡಿನ ಜನರನ್ನು ಆಗ್ರಹಿಸಿದ್ದರು.

ಎಎನ್‌ಐ ವೀಡಿಯೊ ತುಣುಕಿನಲ್ಲಿಯ ವೈಕೋ ಹೇಳಿಕೆಯನ್ನೇ ಮುಖ್ಯಾಂಶವಾಗಿಸಿಕೊಂಡು ಮುಖ್ಯವಾಹಿನಿಯ ಹಲವಾರು ಮಾಧ್ಯಮಗಳು ಸುದ್ದಿಗಳನ್ನು ಪ್ರಕಟಿಸಿವೆ. ‘ಕಾಂಗ್ರೆಸ್ ಪ್ರತಿಯೊಂದೂ ರಂಗದಲ್ಲಿಯೂ ತಮಿಳುನಾಡಿಗೆ ದ್ರೋಹವೆಸಗಿದೆ’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿಯನ್ನು ಪ್ರಕಟಿಸಿರುವ ‌ʼಹಿಂದುಸ್ಥಾನ್ ಟೈಮ್ಸ್ʼ ಎಎನ್‌ಐನ 10 ಸೆಕೆಂಡ್‌ಗಳ ವೀಡಿಯೊ ತುಣುಕಿನಾಚೆ ವೈಕೋ ಏನು ಹೇಳಿದ್ದರು ಎನ್ನುವುದನ್ನು ಎಲ್ಲಿಯೂ ಉಲ್ಲೇಖಸಿಲ್ಲ. CNN News18 ಮತ್ತು News9 ಸೇರಿದಂತೆ ಹಲವಾರು ಮಾಧ್ಯಮಗಳೂ ಇಂತಹುದೇ ವರದಿಗಳನ್ನು ಪ್ರಕಟಿಸಿವೆ.

 

ಪತ್ರಕರ್ತ ರಾಹುಲ್ ಶಿವಶಂಕರ್ ಕೂಡ ಎಎನ್‌ಐ ಟ್ವೀಟ್‌ನ್ನು ಉಲ್ಲೇಖಿಸಿ ಟ್ವೀಟಿಸಿದ್ದು,‌ ಎಂಡಿಎಂಕೆ ಏಕೆ ಇಂಡಿಯಾ ಮೈತ್ರಿಕೂಟದ ಭಾಗವಾಗಿ ಚುನಾವಣೆಗಳಲ್ಲಿ ಹೋರಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

‘ಸಮಯಸಾಧಕ ರಾಜಕೀಯಕ್ಕೆ ಯಾವುದೇ ಮಿತಿಯೇ ಇಲ್ಲವೇ?’ ಎಂದು ಅವರು ಕೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಸಿ.ಆರ್.ಕೇಶವನ್ ಸೇರಿದಂತೆ ಇತರ ಹಲವರೂ ಎಎನ್‌ಐ ಟ್ವೀಟ್‌ನ್ನು ರಿಟ್ವೀಟ್ ಮಾಡಿದ್ದಾರೆ.

ಸತ್ಯ ಪರಿಶೀಲನೆ

ಸತ್ಯ ಪರಿಶೋಧಕ ಜಾಲತಾಣ Alt News ಸುದ್ದಿ ಸಂಸ್ಥೆಯು ʼಸನ್ ನ್ಯೂಸ್ʼ ಟ್ವೀಟಿಸಿದ್ದ ಹೆಚ್ಚಿನ ಅವಧಿಯ ವೀಡಿಯೊ ಕ್ಲಿಪ್‌ ಅನ್ನು ಪತ್ತೆ ಹಚ್ಚಿದೆ. 37 ಸೆಕೆಂಡ್‌ಗಳ ಈ ವೀಡಿಯೊ ತುಣುಕು ವೈಕೋ ಅವರರ ಇಡೀ ಹೇಳಿಕೆಯನ್ನು ಒಳಗೊಂಡಿದೆ. ‘ಕಾಂಗ್ರೆಸ್ ಆ ಸಮಯದಲ್ಲಿ ಪ್ರತಿ ರಂಗದಲ್ಲಿಯೂ ತಮಿಳುನಾಡಿಗೆ ದ್ರೋಹವೆಸಗಿತ್ತು. ಆ ಬಳಿಕ... ಈ ಹತ್ತು ವರ್ಷಗಳು ನರೇಂದ್ರ ಮೋದಿಯವರನ್ನು ಒರೆಗೆ ಹಚ್ಚುವ ಸಮಯವಾಗಿತ್ತು. ಅವರು ದೇಶದ್ರೋಹಿ, ಅವರು ತಮಿಳುನಾಡಿಗೆ ದ್ರೋಹವೆಸಗಿದ್ದಾರೆ, ಅವರು ಭಾರತಕ್ಕೆ ದ್ರೋಹವೆಸಗಿದ್ದಾರೆ, ಅವರು ಶ್ರೀಲಂಕಾಕ್ಕೆ ದ್ರೋಹವೆಸಗಿದ್ದಾರೆ ’ ಎಂದು ಈ ವಿಡಿಯೊ ತುಣುಕಿನಲ್ಲಿ ವೈಕೋ ಹೇಳಿದ್ದಾರೆ.

ವೈಕೋ ಅವರ ಹೇಳಿಕೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂಬ ಅವರ ಆರೋಪವನ್ನು ಕತ್ತರಿಸಿದ ಭಾಗವನ್ನು ಎಎನ್‌ಐ ಟ್ವೀಟಿಸಿತ್ತು ಎನ್ನುವುದು ಸ್ವಷ್ಟವಾಗಿದೆ.

ಬುಧವಾರ,ಎ.3ರಂದು ಡಿಎಂಕೆ ಅಭ್ಯರ್ಥಿ ತಮಿಳಚಿ ತಂಗಪಾಂಡಿಯನ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿಯೂ ವೈಕೋ ಬಿಜೆಪಿಯನ್ನು ಟೀಕಿಸಿದ್ದಾರೆ. ‘ಹಿಂದುತ್ವ ಶಕ್ತಿಗಳನ್ನು ಸೋಲಿಸಬೇಕಿದೆ. ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೇರಲು ಭಾರೀ ಅಲೆಯೊಂದು ಸಜ್ಜುಗೊಂಡಿದೆ. ತಮಿಳುನಾಡಿನಲ್ಲಿ ದ್ರಾವಿಡ ಸರಕಾರವನ್ನು ಅಂತ್ಯಗೊಳಿಸುವುದಾಗಿ ಬಿಜೆಪಿ ನಾಯಕ ಘೋಷಿಸಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಜನರು ಪ್ರತಿಜ್ಞೆ ಮಾಡಬೇಕಿದೆ’ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ್ ಅವರು ವೈಕೋ ಅವರು ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಹೇಳಿಕೆಯ ಕೊನೆಯ ಭಾಗವನ್ನು ಮಾತ್ರ ಟ್ವೀಟಿಸಿದ್ದಾರೆ. ವೈಕೋ ಕಾಂಗ್ರೆಸ್‌ನ್ನು ಟೀಕಿಸಿದ್ದ ಮೊದಲ ಭಾಗ ಮಾಯವಾಗಿರುವುದರಿಂದ ಈ ಟ್ವೀಟ್ ಕೂಡ ಜನರನ್ನು ತಪ್ಪುದಾರಿಗೆಳೆಯುವಂತಿದೆ ಎನ್ನುವುದನ್ನೂ ಇಲ್ಲಿ ಗಮನಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News