ಟ್ರಾಫಿಕ್ ನಲ್ಲಿ ಸಿಲುಕಿಕೊಂಡ ಸಿ ಎಂ ಸ್ಟಾಲಿನ್ : ಪೊಲೀಸ್ ಆಯುಕ್ತೆ ವರ್ಗಾವಣೆ
ಚೆನ್ನೈ: ಚೆನ್ನೈನ ಪೂರ್ವ ಕರಾವಳಿ ರಸ್ತೆಯಲ್ಲಿ ಆಯೋಜನೆಗೊಂಡಿದ್ದ ಎ.ಆರ್.ರಹಮಾನ್ ಸಂಗೀತ ಕಾರ್ಯಕ್ರಮದಲ್ಲಿ ಅವ್ಯವಸ್ಥೆ ಉಂಟಾಗಿದ್ದರಿಂದ ಪಲ್ಲಿಕರಣೈನ ಉಪ ಪೊಲೀಸ್ ಆಯುಕ್ತೆಯಾದ ದೀಪಾ ಸತ್ಯನ್ ಅವರಿಗೆ ಮುಂದಿನ ಆದೇಶದವರೆಗೆ ಯಾವುದೇ ಹುದ್ದೆ ತೋರಿಸದೇ ವರ್ಗಾವಣೆ ಮಾಡಲಾಗಿದೆ ಎಂದು ಸರ್ಕಾರ ಆದೇಶಿಸಿದೆ. ಪೂರ್ವ ಕರಾವಳಿ ರಸ್ತೆಯಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದಿಂದ ಉಂಟಾದ ಸಂಚಾರ ದಟ್ಟಣೆಯಿಂದ, ಆ ದಟ್ಟಣೆಯಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ಬೆಂಗಾವಲು ಪಡೆಯು ಸಿಲುಕಿಕೊಂಡಿದ್ದರಿಂದ ಭದ್ರತಾ ಲೋಪದ ಭೀತಿಯೂ ಎದುರಾಗಿತ್ತು ಎಂದು thenewsminute.com ವರದಿ ಮಾಡಿದೆ.
ಪೂರ್ವ ಕರಾವಳಿ ರಸ್ತೆಯಲ್ಲಿರುವ ಆದಿತ್ಯರಾಮ್ ನಗರದ ಅರಮನೆ ರಸ್ತೆಯಲ್ಲಿ ಆಯೋಜನೆಗೊಂಡಿದ್ದ ಎ.ಆರ್.ರೆಹಮಾನ್ ಸಂಗೀತ ಕಾರ್ಯಕ್ರಮದಲ್ಲಿ ಭಾರಿ ಅವ್ಯವಸ್ಥೆ ಉಂಟಾದ ಎರಡು ದಿನಗಳ ನಂತರ ಈ ಆದೇಶ ಹೊರಬಿದ್ದಿದೆ. ಈ ಅವ್ಯವಸ್ಥೆಯಿಂದ ಅಸಮಾಧಾನಗೊಂಡ ಅಭಿಮಾನಿಗಳು, ಕಾರ್ಯಕ್ರಮವನ್ನು ಸರಿಯಾಗಿ ಆಯೋಜಿಸಿರಲಿಲ್ಲ, ಸಂಗೀತ ಕಾರ್ಯಕ್ರಮದಲ್ಲಿ ಅವ್ಯವಸ್ಥೆ ಉಂಟಾಯಿತು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಗೀತ ಕಾರ್ಯಕ್ರಮ ಆಯೋಜನೆಗೊಂಡಿದ್ದ ಸ್ಥಳದಲ್ಲಿ ಭಾರಿ ಜನಜಂಗುಳಿ ನೆರೆದಿತ್ತು ಎಂದು ಹಲವರು ದೂರಿದ್ದಾರೆ. ಸಂಗೀತ ಕಾರ್ಯಕ್ರಮದ ಪ್ರಾರಂಭಕ್ಕೂ ಹಲವಾರು ಗಂಟೆಗಳ ಮುನ್ನ ಆಗಮಿಸಿದ್ದರೂ, ಸಂಗೀತ ಕಾರ್ಯಕ್ರಮ ಆಯೋಜನೆಗೊಂಡಿದ್ದ ಪ್ರದೇಶದ ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂದು ಹಲವರು ಕಿಡಿ ಕಾರಿದ್ದಾರೆ.