ಪೂಂಛ್:ಮೂವರು ನಾಗರಿಕರ ಸಾವುಗಳ ಕುರಿತು ತನಿಖೆಗೆ ಸೇನೆಯ ಆದೇಶ

Update: 2023-12-24 14:16 GMT

Photo : PTI 

ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಮೂವರು ನಾಗರಿಕರ ಸಾವುಗಳ ಕುರಿತು ಆಂತರಿಕ ತನಿಖೆಗೆ ಸೇನೆಯು ಆದೇಶಿಸಿದೆ. ಈ ಮೂವರು ಸೇನೆಯ ವಶದಲ್ಲಿದ್ದಾಗ ಮೃತಪಟ್ಟಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಆದೇಶ ಹೊರಬಿದ್ದಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಡಿ.21ರಂದು ಪೂಂಛ್ ನಲ್ಲಿ ಭಯೋತ್ಪಾದಕರು ನಡೆಸಿದ್ದ ಹೊಂಚುದಾಳಿಯಲ್ಲಿ ಸೇನೆಯ ನಾಲ್ವರು ಯೋಧರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಈ ವ್ಯಕ್ತಿಗಳನ್ನು ವಿಚಾರಣೆಗಾಗಿ ಸೇನೆಯು ತನ್ನ ವಶಕ್ಕೆ ತೆಗೆದುಕೊಂಡಿತ್ತು ಎನ್ನಲಾಗಿದೆ.

ಬುಫ್ಲಿಯಾಜ್ನ ಟೋಪಾ ಪೀರ್ ಗ್ರಾಮದ ಸಫೀರ್ ಹುಸೇನ್ (43),ಮುಹಮ್ಮದ್ ಶೌಕತ್ (27) ಮತ್ತು ಶಬೀರ್ ಅಹ್ಮದ್ (32) ಅವರ ಮೃತದೇಹಗಳು ಡಿ.22ರಂದು ಪತ್ತೆಯಾಗಿದ್ದವು.

ಸೇನೆಯು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದ ಎಂಟು ಜನರಲ್ಲಿ ಈ ಮೂವರು ಸೇರಿದ್ದರು ಮತ್ತು ಅವರು ‘ಕಸ್ಟಡಿ ಹಿಂಸೆ ’ಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಮೃತರ ಸಂಬಂಧಿಗಳು ಮತ್ತು ರಾಜಕೀಯ ನಾಯಕರು ಆರೋಪಿಸಿದ್ದಾರೆ.

ಮೂವರ ಸಾವುಗಳ ಕುರಿತು ಜಮ್ಮು-ಕಾಶ್ಮೀರ ಪೋಲಿಸರೂ ತನಿಖೆ ನಡೆಸುತ್ತಿದ್ದಾರೆ. ತನಿಖೆಗೆ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡಲು ತಾನು ಬದ್ಧನಿದ್ದೇನೆ ಎಂದು ಸೇನೆಯು ಶನಿವಾರ ತಿಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News