ನ್ಯೂಸ್‌ಕ್ಲಿಕ್‌ ಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಅವರ ತಕ್ಷಣ ಬಿಡುಗಡೆಗೆ ಸುಪ್ರೀಂ ಕೋರ್ಟ್‌ ಆದೇಶ

Update: 2024-05-15 05:47 GMT

Photo credit: newsclick.in

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಯುಎಪಿಎ ಪ್ರಕರಣದಲ್ಲಿ ಬಂಧಿತರಾಗಿರುವ ನ್ಯೂಸ್‌ಕ್ಲಿಕ್‌ ಸ್ಥಾಪಕ ಪ್ರಬೀರ್‌ ಪುರ್ಕಾಯಸ್ಥ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್‌ ಇಂದು ಆದೇಶಿಸಿದೆ. ಪುರ್ಕಾಯಸ್ಥ ಅವರ ಬಂಧನ ಹಾಗೂ ಅವರ ರಿಮಾಂಡ್‌ ಅಮಾನ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ ಹಜೇಳಿದರೆ.

ಅವರ ಕಸ್ಟಡಿ ಅರ್ಜಿಯ ಕುರಿತಂತೆ ವಿಚಾರಣಾ ನ್ಯಾಯಾಲಯ ನಿರ್ಧರಿಸುವ ಮುನ್ನ ರಿಮಾಂಡ್‌ ಅಪ್ಲಿಕೇಶನ್‌ ಮತ್ತು ಬಂಧನಕ್ಕೆ ಕಾರಣವನ್ನು ಪುರ್ಯಕಸ್ಥ ಅಥವಾ ಅವರ ವಕೀಲರಿಗೆ ಒದಗಿಸಲಾಗಿರಲಿಲ್ಲ ಎಂಬ ಅಂಶವನ್ನು ಸುಪ್ರೀಂ ಕೋರ್ಟ್‌ ಗಣನೆಗೆ ತೆಗೆದುಕೊಂಡಿದೆ.

ಈ ಪ್ರಕರಣದಲ್ಲಿ ದಿಲ್ಲಿ ಪೊಲೀಸರು ಚಾರ್ಚ್‌ ಶೀಟ್‌ ಸಲ್ಲಿಸಿರುವುದರಿಂದ, ವಿಚಾರಣಾ ನ್ಯಾಯಾಲಯವು ನಿಗದಿಪಡಿಸುವ ಷರತ್ತುಗಳ ಆಧಾರದಲ್ಲಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ದಿಲ್ಲಿ ಪೊಲೀಸರ ವಿಶೇಷ ಸೆಲ್‌ ಪ್ರಬೀರ್‌ ಮತ್ತು ನ್ಯೂಸ್‌ಕ್ಲಿಕ್‌ ಎಚ್‌ಆರ್‌ ಮುಖ್ಯಸ್ಥ ಅಮಿತ್‌ ಚಕ್ರವರ್ತಿ ಅವರನ್ನು ಕಳೆದ ವರ್ಷದ ಅಕ್ಟೋಬರ್‌ 3ರಂದು ಬಂಧಿಸಿತ್ತು. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಚೀನಾದಿಂದ ಹಣ ಪಡೆದಿದ್ದರು ಎಂಬ ಆರೋಪ ಅವರ ವಿರುದ್ಧ ಹೊರಿಸಲಾಗಿತ್ತು. ಈ ಸುದ್ದಿ ಸಂಸ್ಥೆಗೆ ಹೆಚ್ಚಿನ ಹಣ ಚೀನಾದಿಂದ ಬರುತ್ತಿತ್ತು, 2019 ಲೋಕಸಭಾ ಚುನಾವಣಾ ಪ್ರಕ್ರಿಯೆಗೆ ಅಡ್ಡಿಯುಂಟು ಮಾಡಲು ಈ ಸುದ್ದಿ ಸಂಸ್ಥೆಯು ಪೀಪಲ್ಸ್‌ ಅಲಾಯನ್ಸ್‌ ಫಾರ್‌ ಡೆಮಾಕ್ರೆಸಿ ಎಂಡ್‌ ಸೆಕ್ಯುಲರಿಸಂ ಜೊತೆ ಶಾಮೀಲಾಗಿತ್ತು ಎಂದು ಆರೋಪಿಸಲಾಗಿತ್ತು.

ಈ ಸಂಬಂಧ ದಿಲ್ಲಿಯ 88 ಕಡೆ ಹಾಗೂ ಇತರ ರಾಜ್ಯಗಳ ಏಳು ಕಡೆ ಅಕ್ಟೋಬರ್‌ 3ರಂದು ದಾಳಿಗಳು ನಡೆದಿತ್ತು, ಸುಮಾರು 300 ಎಲೆಕ್ಟ್ರಾನಿಕ್‌ ಸಾಧನಗಳನ್ನು ನ್ಯೂಸ್‌ಕ್ಲಿಕ್‌ ಕಚೇರಿಗಳಿಂದ ಹಾಗೂ ಪತ್ರಕರ್ತರ ನಿವಾಸಗಳಿಂದ ವಶಪಡಿಸಿಕೊಳ್ಳಲಾಗಿತ್ತು.

ಈ ಪ್ರಕರಣ ಸಂಬಂಧ ಒಂಬತ್ತು ಪತ್ರಕರ್ತೆಯರ ಸಹಿತ 46 ಮಂದಿಯನ್ನು ಪ್ರಶ್ನಿಸಲಾಗಿತ್ತು.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News