ಜಾಮೀನು ಸಿಕ್ಕರೂ ಕೇಜ್ರಿವಾಲ್ ಸಿಎಂ ಕಚೇರಿಗೆ ತೆರಳುವಂತಿಲ್ಲ; ನ್ಯಾಯಾಲಯದ ಷರತ್ತುಗಳೇನು?

Update: 2024-09-13 15:30 GMT

ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್‌ (PTI)

ಹೊಸದಿಲ್ಲಿ : ದಿಲ್ಲಿ ಸರಕಾರದ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿ ಸಿಬಿಐ ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರಿಗೆ ಜಾಮೀನು ನೀಡಿದೆ. ಆದರೆ, ಅದೇ ವೇಳೆ, ಅವರು ಮುಖ್ಯಮಂತ್ರಿಯ ಕಚೇರಿಗೆ ಹೋಗಬಾರದು ಮತ್ತು ಕಡತಗಳಿಗೆ ಸಹಿ ಹಾಕಬಾರದು ಎನ್ನುವುದು ಸೇರಿದಂತೆ ಹಲವು ಶರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ದಿಲ್ಲಿ ಮುಖ್ಯಮಂತ್ರಿಯು ಜಾಮೀನು ಪಡೆಯಲು 10 ಲಕ್ಷ ರೂಪಾಯಿ ಮೊತ್ತದ ಒಂದು ಬಾಂಡ್ ಮತ್ತು ಅಷ್ಟೇ ಮೊತ್ತದ ಎರಡು ಭದ್ರತೆಗಳನ್ನು ಒದಗಿಸಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭೂಯನ್ ಅವರನ್ನು ಒಳಗೊಂಡ ನ್ಯಾಯಪೀಠವೊಂದು ಹೇಳಿದೆ.

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಈಡಿ) ದಾಖಲಿಸಿರುವ ಪ್ರಕರಣದಲ್ಲಿ ಕೇಜ್ರಿವಾಲ್‌ರನ್ನು ಮಾರ್ಚ್ 21ರಂದು ಬಂಧಿಸಲಾಗಿತ್ತು. ಅವರಿಗೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಚಾರ ಮಾಡುವುದಕ್ಕಾಗಿ ಸುಪ್ರೀಂ ಕೋರ್ಟ್ ಮೇ 10ರಂದು 21 ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಬಳಿಕ ಅವರು ಜೂನ್ 2ರಂದು ಜೈಲಿಗೆ ವಾಪಸಾಗಿದ್ದು, ಅಂದಿನಿಂದ ಜೈಲಿನಲ್ಲಿದ್ದಾರೆ.

ನಿರಂತರ ಜೈಲುವಾಸವು ವ್ಯಕ್ತಿಗಳ ಸ್ವಾತಂತ್ರ್ಯವನ್ನು ಅನ್ಯಾಯವಾಗಿ ಕಸಿದುಕೊಳ್ಳುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಅರವಿಂದ ಕೇಜ್ರಿವಾಲ್ ಸುಪ್ರೀಂ ಕೋರ್ಟ್‌ನಲ್ಲಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಒಂದು ಅರ್ಜಿಯಲ್ಲಿ ಅವರು ತನಗೆ ಜಾಮೀನು ನಿರಾಕರಿಸಿರುವುದನ್ನು ಪ್ರಶ್ನಿಸಿದರೆ, ಇನ್ನೊಂದರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ತನ್ನನ್ನು ಸಿಬಿಐ ಬಂಧಿಸಿರುವುದನ್ನು ಪ್ರಶ್ನಿಸಿದ್ದರು.

ಆಪ್ ಮುಖ್ಯಸ್ಥರನ್ನು ಸಿಬಿಐಯು ಜೂನ್ 26ರಂದು ಬಂಧಿಸಿತ್ತು. ಅವರು ತನ್ನ ಬಂಧನವನ್ನು ದಿಲ್ಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್ ಆಗಸ್ಟ್ 5ರಂದು ತೀರ್ಪು ನೀಡಿ, ಅವರ ಬಂಧನವನ್ನು ಎತ್ತಿಹಿಡಿದಿತ್ತು. ದಿಲ್ಲಿ ಹೈಕೋರ್ಟ್ ತೀರ್ಪನ್ನು ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಸುಪ್ರೀಂ ಕೋರ್ಟ್ ಜುಲೈ 12ರಂದು ಅಕ್ರಮ ಹಣ ವರ್ಗಾವಣೆಯ ಈಡಿ ಪ್ರಕರಣದಲ್ಲಿ ಜಾಮೀನು ನೀಡಿತ್ತು.

►ಶರತ್ತುಗಳು

*ಜಾಮೀನು ಅವಧಿಯಲ್ಲಿ ಅರವಿಂದ ಕೇಜ್ರಿವಾಲ್ ಪ್ರಕರಣದ ಬಗ್ಗೆ ಮಾತನಾಡಬಾರದು.

*ವಿಚಾರಣೆಗಳಿಗೆ ಹಾಜರಾಗುವುದರಿಂದ ನ್ಯಾಯಾಲಯಗಳು ವಿನಾಯಿತಿ ನೀಡದಿದ್ದರೆ, ದಿಲ್ಲಿ ಮುಖ್ಯಮಂತ್ರಿ ವಿಚಾರಣೆಗಳಿಗೆ ನಿಯಮಿತವಾಗಿ ಹಾಜರಾಗಬೇಕು.

*ಜಾಮೀನು ಅವಧಿಯಲ್ಲಿ ಅವರು ಮುಖ್ಯಮಂತ್ರಿ ಕಚೇರಿ ಅಥವಾ ದಿಲ್ಲಿ ಸಚಿವಾಲಯವನ್ನು ಪ್ರವೇಶಿಸಬಾರದು.

*ಅತ್ಯಗತ್ಯವಲ್ಲದಿದ್ದರೆ ಅವರು ಸರಕಾರಿ ಕಡತಗಳಿಗೆ ಸಹಿ ಹಾಕಬಾರದು.

► ಬಂಧನದ ಸಮಯ : ಸಿಬಿಐಯನ್ನು ತರಾಟೆಗೆ ಎತ್ತಿಕೊಂಡ ನ್ಯಾ. ಉಜ್ಜಲ್ ಭೂಯನ್

ಈ ನಡುವೆ, ಪ್ರತ್ಯೇಕ ತೀರ್ಪೊಂದರಲ್ಲಿ, ಕೇಜ್ರಿವಾಲ್‌ರನ್ನು ಯಾಕೆ ಬಂಧಿಸಲಾಯಿತು ಎಂದು ನ್ಯಾ. ಉಜ್ಜಲ್ ಭೂಯನ್ ಸಿಬಿಐಯನ್ನು ಪ್ರಶ್ನಿಸಿದರು. ಕೇಜ್ರಿವಾಲ್‌ರ ಬಂಧನದ ಸಮಯಕ್ಕೆ ಸಂಬಂಧಿಸಿದಂತೆ, ಸಿಬಿಐಯ ಕೃತ್ಯಗಳು ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದೆ ಮತ್ತು ಇಂಥ ಬಂಧನವು ಈಡಿ ಪ್ರಕರಣದಲ್ಲಿ ಅವರು ಪಡೆದಿರುವ ಜಾಮೀನನ್ನು ಸತ್ವಹೀನಗೊಳಿಸಿದೆ ಎಂದು ಅವರು ಹೇಳಿದರು.

ಈಡಿ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಜಾಮೀನು ಲಭಿಸಿರುವಾಗ ಅವರನ್ನು ಜೈಲಿನಲ್ಲಿ ಇರಿಸುವುದು ನ್ಯಾಯದ ವಿಡಂಬನೆಯಾಗುತ್ತದೆ ಎಂದು ನ್ಯಾ. ಭೂಯನ್ ಹೇಳಿದರು. ಅರವಿಂದ ಕೇಜ್ರಿವಾಲ್‌ಗೆ ಈಡಿ ಪ್ರಕರಣದಲ್ಲಿ ಜಾಮೀನು ಸಿಕ್ಕಿರುವುದರಿಂದ ಸಿಬಿಐ ಪ್ರಕರಣದಲ್ಲಿ ಅವರನ್ನು ಮತ್ತೆ ಜೈಲಿನಲ್ಲಿ ಇರಿಸುವುದಕ್ಕೆ ಯಾವುದೇ ಸಮರ್ಥನೆಯಿಲ್ಲ ಎಂದರು.

ಜಾಮೀನು ಸಾಮಾನ್ಯ ಮತ್ತು ಜೈಲು ಅಪವಾದ ಎನ್ನುವುದನ್ನು ನ್ಯಾ. ಭೂಯನ್ ಪುನರುಚ್ಚರಿಸಿದರು. ‘‘ವಿಚಾರಣಾ ಪ್ರಕ್ರಿಯೆ ಅಥವಾ ಬಂಧನದ ಪೂರ್ವಭಾವಿ ಕ್ರಮಗಳು ಕಿರುಕುಳವಾಗಬಾರದು’’ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಸಿಬಿಐ ಬಂಧನವು ‘‘ಅಸಮರ್ಥನೀಯ’’, ಹಾಗಾಗಿ ಕೇಜ್ರಿವಾಲ್‌ರನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ನ್ಯಾ. ಭೂಯನ್ ಹೇಳಿದರು.

‘‘ಅರವಿಂದ ಕೇಜ್ರಿವಾಲ್‌ರನ್ನು ಬಂಧಿಸಲು ಸಿಬಿಯ 22 ತಿಂಗಳುಗಳಿಂದ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಆದರೆ ಈಡಿ ಪ್ರಕರಣದಲ್ಲಿ ಅವರು ಬಿಡುಗಡೆಗೊಳ್ಳುತ್ತಿರುವಂತೆಯೇ ಅವರನ್ನು ಸಿಬಿಐ ಬಂಧಿಸಿತು. ಸಿಬಿಐಗೆ ಅಂಥ ತುರ್ತು ಏನಿತ್ತು ಎನ್ನುವುದು ನನಗೆ ಅರ್ಥವಾಗುವುದಿಲ್ಲ’’ ಎಂದು ನ್ಯಾಯಾಧೀಶರು ಹೇಳಿದರು.

► ಬಂಧನದ ಕಾನೂನುಬದ್ಧತೆ ಬಗ್ಗೆ ನ್ಯಾಯಾಧೀಶರಲ್ಲಿ ಭಿನ್ನಾಭಿಪ್ರಾಯ

ಅಭಿವೃದ್ಧಿ ಹೊಂದಿದ ಸಮಾಜಕ್ಕಾಗಿ ಸುಧಾರಿತ ನ್ಯಾಯವ್ಯವಸ್ಥೆಯೊಂದು ಬೇಕು, ವಿಚಾರಣೆ ನಡೆಯುತ್ತಿರುವಾಗ ಆರೋಪಿಗಳನ್ನು ಸುದೀಘಾವಧಿಗೆ ಜೈಲಿನಲ್ಲಿ ಇರಿಸುವುದು ಸಮರ್ಥನೀಯವಲ್ಲ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಅಭಿಪ್ರಾಯಪಟ್ಟರು.

ಆದರೆ, ಇಬ್ಬರೂ ನ್ಯಾಯಾಧೀಶರು ಸರ್ವಾನುಮತದಿಂದ ಜಾಮೀನು ನೀಡಿದರೂ, ಕೇಜ್ರಿವಾಲ್‌ರನ್ನು ಸಿಬಿಐ ಬಂಧಿಸಿರುವುದು ಕಾನೂನುಬದ್ಧವೇ ಎಂಬ ವಿಚಾರದಲ್ಲಿ ನ್ಯಾಯಾಧೀಶರು ಭಿನ್ನ ತೀರ್ಪುಗಳನ್ನು ನೀಡಿದರು.

ಸಿಬಿಐಯು ಕೇಜ್ರಿವಾಲ್‌ರನ್ನು ಬಂಧಿಸಿರುವುದು ಕಾನೂನುಬದ್ಧವೇ ಎಂಬ ವಿಷಯದ ಬಗ್ಗೆ, ಬಂಧನವು ಕಾನೂನುಬದ್ಧವಾಗಿದೆ ಮತ್ತು ಸಾಂದರ್ಭಿಕ ಕಾನೂನುಗಳಿಗೆ ಅನುಗುಣವಾಗಿದೆ ಎಂದು ನ್ಯಾ. ಸೂರ್ಯಕಾಂತ್ ಹೇಳಿದರು.

‘‘ಇನ್ನೊಂದು ಪ್ರಕರಣದಲ್ಲಿ ಈಗಾಗಲೇ ಕಸ್ಟಡಿಯಲ್ಲಿರುವ ವ್ಯಕ್ತಿಯನ್ನು ತನಿಖೆಯ ಉದ್ದೇಶಕ್ಕಾಗಿ ಬಂಧಿಸುವುದರಲ್ಲಿ ತಪ್ಪಿಲ್ಲ. ಬಂಧನವು ಯಾಕೆ ಅಗತ್ಯವಾಯಿತು ಎನ್ನುವುದನ್ನು ಸಿಬಿಐ ತನ್ನ ಅರ್ಜಿಯಲ್ಲಿ ತಿಳಿಸಿದೆ. ಇಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ 41(ಎ)(3) ವಿಧಿಯ ಉಲ್ಲಂಘನೆಯಾಗಿಲ್ಲ’’ ಎಂದು ಅವರು ಅಭಿಪ್ರಾಯಪಟ್ಟರು.

ಆದರೆ, ಇದಕ್ಕೆ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾ. ಭೂಯನ್, ಬಂಧನ ಅಗತ್ಯವಾಗಿರಲಿಲ್ಲ ಮತ್ತು ಕಿರುಕುಳ ಕೊಡುವ ಉದ್ದೇಶಕ್ಕಾಗಿ ಬಂಧನದ ಅಧಿಕಾರವನ್ನು ದುರುಪಯೋಗಪಡಿಸಬಾರದು ಎಂದು ಹೇಳಿದ್ದಾರೆ.

ಸತ್ಯಕ್ಕೆ ಸಿಕ್ಕಿದ ಜಯ: ಆಪ್

ದಿಲ್ಲಿ ಸರಕಾರದ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರಿಗೆ ಜಾಮೀನು ನೀಡುವ ಸುಪ್ರೀಂ ಕೋರ್ಟ್ ತೀರ್ಪು ‘‘ಸತ್ಯದ ಜಯವಾಗಿದೆ’’ ಎಂದು ಆಮ್ ಆದ್ಮಿ ಪಕ್ಷ ಶುಕ್ರವಾರ ಬಣ್ಣಿಸಿದೆ.

ಸಾಮಾಜಿಕ ಮಾಧ್ಯಮ ‘ಎಕ್ಸ್’ (ಹಿಂದಿನ ಟ್ವಿಟರ್)ನಲ್ಲಿ ಶುಕ್ರವಾರ ಹಾಕಿರುವ ಸಂದೇಶದಲ್ಲಿ, ‘‘ಸತ್ಯಮೇವ ಜಯತೇ’’ ಎಂಬುದಾಗಿ ಆಪ್ ಹೇಳಿದೆ.

ದಿಲ್ಲಿ ಮತ್ತು ಹರ್ಯಾಣ ವಿಧಾನಸಭೆಗಳ ಚುನಾವಣೆಗಳಿಗೆ ಆಪ್ ತಯಾರಾಗುತ್ತಿರುವ ಹಂತದಲ್ಲಿ, ಪಕ್ಷದ ಮುಖ್ಯಸ್ಥರಿಗೆ ಜಾಮೀನು ಸಿಕ್ಕಿರುವುದು ಪಕ್ಷಕ್ಕೆ ಲಭಿಸಿದ ದೊಡ್ಡ ಮುನ್ನಡೆಯಾಗಿದೆ.

ಬಿಜೆಪಿಯ ಯೋಜನೆಗಳು ತಲೆಕೆಳಗಾಗಿವೆ: ಸುನೀತಾ ಕೇಜ್ರಿವಾಲ್

ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಬಳಿಕ, ಬಿಜೆಪಿಯ ಯೋಜನೆಗಳು ತಲೆಕೆಳಗಾಗಿವೆ ಎಂದು ಅವರ ಪತ್ನಿ ಸುನೀತಾ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೇಜ್ರಿವಾಲ್ ಜೈಲಿನಲ್ಲಿದ್ದಾಗ, ಸುನೀತಾ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಬಿಜೆಪಿಯು ತಾನು ಅಧಿಕಾರದಲ್ಲಿರುವುದಕ್ಕಾಗಿ ಪ್ರತಿಪಕ್ಷ ನಾಯಕರನ್ನು ಜೈಲಿಗೆ ಹಾಕುತ್ತಿದೆ ಎಂದು ಅವರು ಆರೋಪಿಸಿದರು.

‘‘ಬಿಜೆಪಿಯ ಯೋಜನೆಗಳು ತಲೆಕೆಳಗಾಗಿವೆ. ಪ್ರತಿಪಕ್ಷ ನಾಯಕರನ್ನು ಜೈಲಿಗೆ ಅಟ್ಟಿ ತಾವು ಅಧಿಕಾರದಲ್ಲಿರಲು ಅವರು ಬಯಸುತ್ತಿದ್ದಾರೆ. ಅವರ ಏಕೈಕ ಗುರಿ ಇದು’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

ಬಿಜೆಪಿಯ ಆಣತಿಯಂತೆ ಸಿಬಿಐ ಕಾರ್ಯ: ಸಿಸೋಡಿಯ

ಅರವಿಂದ ಕೇಜ್ರಿವಾಲ್‌ರನ್ನು ಜೈಲಿನಲ್ಲಿರಿಸಲು ಸಿಬಿಐಯು ಬಿಜೆಪಿಯ ಆಣತಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ದಿಲ್ಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಶುಕ್ರವಾರ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಕೇಜ್ರಿವಾಲ್‌ರಿಗೆ ಜಾಮೀನು ನೀಡಿದ ಬಳಿಕ ಅವರು ಪ್ರತಿಕ್ರಿಯಿಸುತ್ತಿದ್ದರು. ಇದೇ ಪ್ರಕರಣದಲ್ಲಿ ಸಿಸೋಡಿಯ ಸುಮಾರು 18 ತಿಂಗಳು ಜೈಲಿನಲ್ಲಿದ್ದರು. ಅವರಿಗೆ ಸುಪ್ರೀಂ ಕೋರ್ಟ್ ಕಳೆದ ತಿಂಗಳಷ್ಟೇ ಜಾಮೀನು ನೀಡಿತ್ತು.

‘‘ಅರವಿಂದ ಕೇಜ್ರಿವಾಲ್‌ರನ್ನು ಜೈಲಿನಲ್ಲಿರಿಸಲು ಬಿಜೆಪಿಯು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅವರನ್ನು ಜೈಲಿನಲ್ಲೇ ಇರಿಸುವ ದೃಷ್ಟಿಯಿಂದ ಸಿಬಿಐಯು ಅವರನ್ನು ಬಂಧಿಸಿದೆ ಎನ್ನುವುದು ಅವರ ಬಂಧಿಸಿದ ರೀತಿಯಿಂದ ಸ್ಪಷ್ಟವಾಗಿದೆ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ. ಕೇಜ್ರಿವಾಲ್ ಯಾವುದೇ ತಪ್ಪು ಮಾಡಿಲ್ಲ. ಹಾಗಾದರೆ ಇದರ ಹಿಂದೆ ಇರುವವರು ಯಾರು? ಇದರ ಹಿಂದೆ ಇರುವುದು ಬಿಜೆಪಿ. ಹಾಗಾಗಿಯೇ, ಈಡಿ ಪ್ರಕರಣದಲ್ಲಿ ಕೇಜ್ರಿವಾಲ್‌ರ ಬಿಡುಗಡೆಯಾಗುವುದರಲ್ಲಿದ್ದಾಗ, ಸಿಬಿಐಯು ಅವರನ್ನು ಬಂಧಿಸಿತು. ಯಾವುದೇ ಭ್ರಷ್ಟಾಚಾರಕ್ಕಾಗಿ ಸಿಬಿಐ ಅವರನ್ನು ಬಂಧಿಸಿಲ್ಲ. ಬಿಜೆಪಿಗೆ ಅದು ಬೇಕಾಗಿತ್ತು ಎನ್ನುವ ಕಾರಣಕ್ಕಾಗಿ ಬಂಧಿಸಿದೆ. ಸುಪ್ರೀಂ ಕೋರ್ಟ್ ಕೂಡ ಇಂದು ಇದನ್ನೇ ಹೇಳಿದೆ. ಇಂದು ಸುಪ್ರೀಂ ಕೋರ್ಟ್‌ನಲ್ಲಿ ಬಿಜೆಪಿಯ ಬಂಡವಾಳ ಬಯಲಾಗಿದೆ’’ ಎಂದರು.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News