ಬೋಗಸ್ ದಾಖಲೆ , ಸುಳ್ಳು ಮಾಹಿತಿ ಹಾಕಿ ಮೋದಿ ಸರಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಸೃಷ್ಟಿಸುತ್ತಿರುವ ಬ್ಯಾಂಕು ಗಳು !

Update: 2024-03-26 14:36 GMT

ಡೆಹ್ರಾಡೂನ್: ಮೋದಿ ಸರಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಸಹಿತ ಇತರ ಕೆಲವು ವಿಮಾ ಯೋಜನೆಗಳಿಗೆ ಜನರ ಒಪ್ಪಿಗೆ ಇಲ್ಲದೆಯೇ ಬ್ಯಾಂಕುಗಳು ಅವರನ್ನು ಸೇರಿಸಿ ಅವರ ಖಾತೆಗಳಿಂದ ಪ್ರೀಮಿಯಂ ಮೊತ್ತವನ್ನು ಕಡಿತ ಮಾಡುತ್ತಿರುವುದು ಬಯಲಾಗಿದೆ. ಜೊತೆಗೆ ಈ ರೀತಿ ಜನರನ್ನು ಸೇರಿಸುವಾಗ ಬೇಕಿರುವ ದಾಖಲೆಗಳನ್ನು, ಮಾಹಿತಿಗಳನ್ನು ಬ್ಯಾಂಕುಗಳೇ ಸೃಷ್ಟಿಸುತ್ತಿರುವುದೂ ಕಂಡು ಬಂದಿದೆ ಎಂದು article-14.com ನ ತನಿಖಾ ವರದಿ ತಿಳಿಸಿದೆ. ಹೊಸ ಸಾಕ್ಷ್ಯಗಳ ಪ್ರಕಾರ ಈ ನಕಲಿ ದಾಖಲೆ ಸೃಷ್ಟಿ ಪ್ರಕ್ರಿಯೆಯನ್ನು ಸಂಪೂರ್ಣ ಸಾಂಸ್ತೀಕರಣಗೊಳಿಸಿ ಬ್ಯಾಂಕುಗಳ ರೀಜನಲ್, ಝೋನಲ್ ಹಾಗು ಪ್ರಧಾನ ಕಚೇರಿಗಳೂ ಇದರಲ್ಲಿ ಶಾಮೀಲಾಗಿ ತಮ್ಮ ಶಾಖೆಗಳು ಹಾಗು ಫೀಲ್ಡ್ ಸಿಬ್ಬಂದಿಗಳಿಗೂ ಹೀಗೆ ಮಾಡುವಂತೆ ಸೂಚಿಸಿವೆ ಎಂದು ತನಿಖಾ ವರದಿ ತಿಳಿಸಿದೆ.

ಸಾಮಾನ್ಯ ವ್ಯಕ್ತಿ ಯಾರಿಂದಾದರೂ ಹಣವನ್ನು ಕೇಳಿ ಪಡೆಯುತ್ತಾನೆಯೇ ಹೊರತು ನೇರವಾಗಿ ಅವರ ಜೇಬಿಗೆ ಕೈ ಹಾಕುವುದಿಲ್ಲ. ಆದರೆ ನಾವು ನಮ್ಮ ಹಣದ ಸುರಕ್ಷತೆಗಾಗಿ ನಂಬಿಕೊಂಡಿರುವ ಬ್ಯಾಂಕುಗಳು ನಮ್ಮನ್ನು ಕೇಳದೆಯೇ ನಮ್ಮ ಖಾತೆಗಳಿಂದ ಹಣವನ್ನು ಕಡಿತಗೊಳಿಸುತ್ತವೆ. ಹೀಗೆ ಹಣ ಕಡಿತಗೊಳಿಸುವ ಮುನ್ನ ಗ್ರಾಹಕರಿಗೆ ಮಾಹಿತಿ ನೀಡುವ ಕನಿಷ್ಠ ಸೌಜನ್ಯವೂ ಬ್ಯಾಂಕುಗಳಿಗಿಲ್ಲ. ಅಮಾಯಕ ಗ್ರಾಹಕರ ಮೇಲೆ ಸವಾರಿ ಮಾಡುವ ಅವುಗಳನ್ನು ಪ್ರಶ್ನಿಸಬೇಕಾದ ಕಾಲವೀಗ ಬಂದಿದೆ.

ಬ್ಯಾಂಕುಗಳು ಮೋದಿ ಸರಕಾರದ ವಿಮಾ ಯೋಜನೆಗಳಿಗಾಗಿ ತಮ್ಮ ಖಾತೆಗಳಿಂದ ಹಣವನ್ನು ಕಡಿತಗೊಳಿಸುವುದರ ವಿರುದ್ಧ ಹೆಚ್ಚಿನ ಗ್ರಾಹಕರು ಆಕ್ರೋಶಗೊಂಡಿದ್ದಾರೆ, ಬ್ಯಾಂಕ್ ಶಾಖೆಗಳಿಗೆ ತೆರಳಿ ದಬಾಯಿಸಿದ್ದಾರೆ. ಇಂತಹ ಕೆಲವು ಗ್ರಾಹಕರಿಂದ ಕಡಿತ ಮಾಡಿದ್ದ ಹಣವನ್ನು ಬ್ಯಾಂಕುಗಳು ಅವರ ಖಾತೆಗಳಿಗೆ ಮರಳಿಸಿವೆ. ಇನ್ನು ಕೆಲವರು ನ್ಯಾಯಾಲಯಗಳ ಮೆಟ್ಟಿಲುಗಳನ್ನೇರಿದ್ದು, ರಾಜಿ ಸಂಧಾನಕ್ಕಾಗಿ ಬ್ಯಾಂಕುಗಳು ಅಲವತ್ತುಕೊಂಡರೂ ಕ್ಯಾರೇ ಎನ್ನುತ್ತಿಲ್ಲ. ಇದು ಕೇವಲ ಹಣದ ಪ್ರಶ್ನೆಯಲ್ಲ, ಇದು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಮಾಡುತ್ತಿರುವ ವಂಚನೆಯಾಗಿದೆ. ಇದನ್ನು ನಿಲ್ಲಿಸಲೇಬೇಕಿದೆ ಎಂದು ಅವರು ದೃಢನಿರ್ಧಾರ ಮಾಡಿದ್ದಾರೆ.


ಬಿಹಾರದ ಸರನ್ ಜಿಲ್ಲೆಯ ಇಂಜಿನಿಯರಿಂಗ್ ಪದವೀಧರ ಕುಂದನ್ ಕುಮಾರ್ ಕಳೆದೊಂದು ವರ್ಷದಿಂದಲೂ ತಾನು ಖರೀದಿಸಲು ಆಯ್ಕೆಯನ್ನೇ ಮಾಡಿರದಿದ್ದ ವಿಮಾ ಪಾಲಿಸಿಯಿಂದ ಕಳಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಕುಮಾರ್ ಅನುಮತಿಯಿಲ್ಲದೇ ಅವರ ಬ್ಯಾಂಕು ಅವರ ಖಾತೆಯಿಂದ ಹಣವನ್ನು ಕಡಿತಗೊಳಿಸಿತ್ತು ಮತ್ತು ಅವರ ಹೆಸರನ್ನು ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (ಪಿಎಂಜೆಜೆಬಿವೈ)ಗೆ ಸೇರಿಸಿತ್ತು.

https://jansuraksha.gov.in/Files/PMJJBY/ENGLISH/Rules.pdf

ಕುಮಾರ್ ಎಸ್ಬಿಐನಲ್ಲಿ ಖಾತೆಯನ್ನು ಹೊಂದಿದ್ದು, 2022,ಡಿ.29ರಂದು ಬ್ಯಾಂಕು ಅವರ ಖಾತೆಯಿಂದ ಹಣವನ್ನು ಕಡಿತಗೊಳಿಸಿತ್ತು. ದಿನಗಳ ಬಳಿಕ ಇದರ ಅರಿವಾದಾಗ ತನ್ನ ಹಣದ ರಕ್ಷಣೆ ಮಾಡಬೇಕಿದ್ದ ಬ್ಯಾಂಕು ತನ್ನ ಅನುಮತಿಯಿಲ್ಲದೆ ಹಣವನ್ನು ಕಡಿತಗೊಳಿಸಿದ್ದಕ್ಕಾಗಿ ಅಸಮಾಧಾನಗೊಂಡಿದ್ದ ಕುಮಾರ್ ಮಾಹಿತಿ ಹಕ್ಕು ಕಾಯ್ದೆಯಡಿ ಬ್ಯಾಂಕಿನಿಂದ ವಿಮಾ ಪಾಲಿಸಿಗೆ ತನ್ನ ಅರ್ಜಿಯ ಪ್ರತಿಯನ್ನು ಕೋರಿದ್ದರು. ಸದ್ರಿ ವಿಮೆಗಾಗಿ ಯಾವುದೇ ಅರ್ಜಿಯು ಕಂಡು ಬಂದಿಲ್ಲ ಎಂದು ಬ್ಯಾಂಕು 2023, ಫೆ.2ರಂದು ನೀಡಿದ್ದ ಉತ್ತರದಲ್ಲಿ ತಿಳಿಸಿತ್ತು.

ಜೀವವಿಮೆಯಲ್ಲದೆ ಬ್ಯಾಂಕುಗಳು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (ಪಿಎಂಎಸ್ಬಿವೈ)ಗೂ ಗ್ರಾಹಕರ ಅನುಮತಿಯಿಲ್ಲದೆ ಅವರನ್ನು ನೋಂದಾಯಿಸುತ್ತಿವೆ.

https://jansuraksha.gov.in/Files/PMSBY/ENGLISH/Rules.pdf

ಈ ಅನಪೇಕ್ಷಿತ ವಿಮೆಗಾಗಿ ಬ್ಯಾಂಕು ಕುಮಾರ್ ಗೆ ಹಣವನ್ನು ಮರುಪಾವತಿಸಿಲ್ಲ. ತಾನು ಈ ಕೊಳಕು ವ್ಯವಸ್ಥೆಯಿಂದ ಹೊರಬರಲು ಮಾರ್ಗವನ್ನು ಇನ್ನೂ ಹುಡುಕುತ್ತಿದ್ದೇನೆ ಎಂದು ಸುದ್ದಿಸಂಸ್ಥೆ article-14.com ಜೊತೆ ಮಾತನಾಡಿದ ಕುಮಾರ್ ಹೇಳಿದರು.

ಕುಮಾರ್ ಅವರಂತೆ ದೇಶಾದ್ಯಂತ ಹಲವಾರು ಜನರು ಸರಕಾರದ ವಿಮಾ ಯೋಜನೆಗಳಿಗಾಗಿ ತಮ್ಮ ಖಾತೆಗಳಿಂದ ಅನಧಿಕೃತವಾಗಿ ಹಣ ಕಡಿತವನ್ನು ಪ್ರತಿಭಟಿಸಿದ್ದಾರೆ.


ಜೀವವಿಮೆಯಲ್ಲದೆ ಬ್ಯಾಂಕುಗಳು ಗ್ರಾಹಕರ ಅನುಮತಿಯಿಲ್ಲದೆ ಅವರನ್ನು ಅಪಘಾತ ವಿಮೆಯಾಗಿರುವ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (ಪಿಎಂಎಸ್ಬಿವೈ)ಗೂ ನೋಂದಾಯಿಸುತ್ತಿವೆ. ಕೇಂದ್ರದ ಅಟಲ್ ಪಿಂಚಣಿ ಯೋಜನೆ (ಎಪಿವೈ)ಗೂ ಗ್ರಾಹಕರ ಅರಿವಿಲ್ಲದೆ ಅವರ ಖಾತೆಗಳಿಂದ ಹಣವನ್ನು ಕಡಿತಗೊಳಿಸುತ್ತಿವೆ.

https://npscra.nsdl.co.in/nsdl/scheme-details/Oct162015.pdf

ಕುಮಾರ್ ಒಪ್ಪಿಗೆಯಿಲ್ಲದೆ ಅವರನ್ನು ಪಿಎಂಜೆಜೆಬಿವೈಗೆ ಸೇರಿಸಿದ್ದರೆ, ಅವರ ತಾಯಿಯ ಹೆಸರನ್ನು ಒಪ್ಪಿಗೆ ಪಡೆಯದೇ ಎಪಿವೈಗೆ ಸೇರಿಸಲಾಗಿದೆ.

ಪಿಎಂಜೆಜೆಬಿವೈಗೆ ವಾರ್ಷಿಕ ಪ್ರೀಮಿಯಂ 436 ರೂ.ಗಳಾಗಿದ್ದರೆ ಪಿಎಂಎಸ್ಬಿವೈಗೆ 20 ರೂ.ಗಳಾಗಿವೆ. ಗ್ರಾಹಕ ಒಮ್ಮೆ ಈ ಯೋಜನೆಗಳಿಗೆ ಚಂದಾದಾರನಾದರೆ ಪ್ರತಿ ವರ್ಷ ಆತನ/ಆಕೆಯ ಖಾತೆಯಿಂದ ಹಣ ಕಡಿತವಾಗುತ್ತಲೇ ಇರುತ್ತದೆ.

ಪಿಎಂಜೆಜೆಬಿವೈ ಯಾವುದೇ ಕಾರಣದಿಂದ ಸಾವು ಸಂಭವಿಸಿದರೆ ಪಾಲಿಸಿದಾರನ ನಾಮಿನಿಗೆ ಎರಡು ಲಕ್ಷ ರೂ.ಗಳ ವಿಮೆಹಣವನ್ನು ನೀಡುತ್ತದೆ. ಪಿಎಂಎಸ್ಬಿವೈ ಅಪಘಾತದಿಂದ ಸಾವು ಸಂಭವಿಸಿದರೆ ಎರಡು ಲಕ್ಷ ರೂ. ಮತ್ತು ತೀವ್ರವಾಗಿ ಗಾಯಗೊಂಡರೆ ಒಂದು ಲಕ್ಷ ರೂ.ಗಳ ಪರಿಹಾರವನ್ನು ಒದಗಿಸುತ್ತದೆ. ಎಪಿವೈ 60 ವರ್ಷ ವಯಸ್ಸಿನ ಬಳಿಕ 5,000 ರೂ.ವರೆಗೂ ಮಾಸಿಕ ಪಿಂಚಣಿಯನ್ನು ನೀಡುತ್ತದೆ. ಮಾಸಿಕ ಶುಲ್ಕವು ಆಯ್ಕೆ ಮಾಡಿದ ಪಿಂಚಣಿ ಪ್ಲಾನ್ ಅನ್ನು ಅವಲಂಬಿಸಿರುತ್ತದೆ.


ಹೆಚ್ಚಿನ ಸಂದರ್ಭಗಳಲ್ಲಿ ಅನುಮತಿಯಿಲ್ಲದೆ ಯೋಜನೆಗಳಿಗೆ ನೋಂದಾಯಿತರಾದವರಿಗೆ ತಾವು ವಿಮಾ ರಕ್ಷಣೆಗಾಗಿ ಪ್ರೀಮಿಯಂ ನೀಡುತ್ತಿದ್ದೇವೆ ಎನ್ನುವುದೂ ಗೊತ್ತಿರುವುದಿಲ್ಲ, ಇದು ದುರಂತ ಸಂಭವಿಸಿದ ಸಂದರ್ಭಗಳಲ್ಲಿ ಕುಟುಂಬದ ಸದಸ್ಯರು ಯೋಜನೆಯ ಲಾಭಗಳನ್ನು ಪಡೆಯುವುದನ್ನು ತಡೆಯುತ್ತದೆ ಮತ್ತು ಅನುಮತಿಯಿಲ್ಲದೆ ಕಡಿತಗೊಂಡ ಪ್ರೀಮಿಯಂ ಹಣವೂ ವ್ಯರ್ಥವಾಗುತ್ತದೆ.

ಪಾಲಿಸಿದಾರರ/ಖಾತೆದಾರರ ಒಪ್ಪಿಗೆಯಿಲ್ಲದೆ ವಿಮೆ ಯೋಜನೆಗಳನ್ನು ಸಕ್ರಿಯಗೊಳಿಸುವಾಗ ಸುಳ್ಳು ಮಾಹಿತಿಗಳನ್ನು ನಮೂದಿಸಲಾಗುತ್ತದೆ ಎಂದು ಬ್ಯಾಂಕ್ ಉದ್ಯೋಗಿಗಳೇ ಒಪ್ಪಿಕೊಂಡಿದ್ದಾರೆ.

ಸುದ್ದಿಸಂಸ್ಥೆಗೆ ಲಭ್ಯವಾಗಿರುವ ಇಂತಹ ಗ್ರಾಹಕರ ಪಾಲಿಸಿಗಳು ಬೋಗಸ್ ನಾಮಿನಿಗಳನ್ನು ತೋರಿಸಿವೆ. ಇದು ಯೋಜನೆಯ ಲಾಭಗಳನ್ನು ಪಡೆದುಕೊಳ್ಳಲು ಪಾಲಿಸಿದಾರನ ಕುಟುಂಬಕ್ಕೆ ನಿರ್ಬಂಧವನ್ನೂ ಒಡ್ಡುತ್ತದೆ.

ಈ ಅವ್ಯವಹಾರವನ್ನು ಸಾಂಸ್ಥಿಕಗೊಳಿಸಲಾಗಿದೆ ಮತ್ತು ಬ್ಯಾಂಕುಗಳ ಪ್ರಾದೇಶಿಕ,ವಲಯ ಮತ್ತು ಮುಖ್ಯ ಕಚೇರಿಗಳು ಸಹ ಈ ವಂಚನೆಗಳಲ್ಲಿ ಕಾರ್ಯಗತಗೊಳಿಸುತ್ತಿವೆ ಮತ್ತು ಅದನ್ನು ಮರೆಮಾಚುವಂತೆ ಶಾಖೆಗಳನ್ನು ಒತ್ತಾಯಿಸುತ್ತವೆ ಎನ್ನುವುದನ್ನು ಹೊಸ ಸಾಕ್ಷ್ಯಾಧಾರಗಳು ಬಹಿರಂಗಗೊಳಿಸಿವೆ ಎಂದು ಸುದ್ದಿಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

ಬ್ಯಾಂಕ್ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ಸಂಘಗಳು ಈ ಯೋಜನೆಗಳಿಗಾಗಿ ಗ್ರಾಹಕರ ಖಾತೆಗಳಿಂದ ಅನಧಿಕೃತವಾಗಿ ಹಣವನ್ನು ಕಡಿತಗೊಳಿಸುವ ಅವ್ಯವಹಾರವನ್ನು ವಿರೋಧಿಸಿವೆ, ಆದರೆ ಬ್ಯಾಂಕುಗಳು ಇದಕ್ಕೆ ಸೊಪ್ಪು ಹಾಕುತ್ತಿಲ್ಲ.


ಸಾಮಾಜಿಕ ಮಾಧ್ಯಮ ಎಕ್ಸ್ ವಂಚನೆಗೊಳಗಾದ ಇಂತಹ ಗ್ರಾಹಕರ ದೂರುಗಳಿಂದ ತುಂಬಿಹೋಗಿದೆ. ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು, ನಿರುದ್ಯೋಗಿ ಯುವಜನರು ಮತ್ತು ಬಡವರಾಗಿದ್ದು,ಅವರಿಗೆ ಒಂದು ರೂಪಾಯಿಯೂ ಮುಖ್ಯವಾಗಿದೆ. ಈ ಅನಧಿಕೃತ ಮತ್ತು ಯೋಜಿತವಲ್ಲದ ಕಡಿತಗಳಿಂದಾಗಿ ತಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಋಣಾತ್ಮಕವಾಗಿದೆ ಎಂದು ಕೆಲವರು ತಮ್ಮ ಎಕ್ಸ್ ಪೋಸ್ಟ್ ಗಳಲ್ಲಿ ಅಳಲು ತೋಡಿಕೊಂಡಿದ್ದಾರೆ.

ಕೃಪೆ: article-14.com

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News