ತನ್ನ ಹಾಗೂ ಅಮಿತ್ ಶಾ ನಡುವಿನ ಮಾತುಕತೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ವೇದಿಕೆಯಲ್ಲೇ ಗದರಿದ ವಿಡಿಯೋ ಕುರಿತು ಬಿಜೆಪಿ ನಾಯಕಿ ತಮಿಳಿಸೈ ಸ್ಪಷ್ಟನೆ
ಚೆನ್ನೈ: ಅಮಿತ್ ಶಾ ತಮಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ ಎಂದು ವಿಡಿಯೊವೊಂದನ್ನು ಉಲ್ಲೇಖಿಸಿ ಮಾಧ್ಯಮಗಳು ಮಾಡಿದ್ದ ವರದಿಗಳನ್ನು ತಮಿಳುನಾಡು ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ ಅಲ್ಲಗಳೆದಿದ್ದಾರೆ.
ತಮ್ಮ ಹಾಗೂ ಅಮಿತ್ ಶಾ ನಡುವಿನ ಮಾತುಕತೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದ್ದು, ಅಮಿತ್ ಶಾ ಅವರು ರಾಜಕಾರಣ ಹಾಗೂ ಕ್ಷೇತ್ರದ ಕೆಲಸಗಳನ್ನು ತೀವ್ರವಾಗಿ ಮುಂದುವರಿಸಿಕೊಂಡು ಹೋಗುವಂತೆ ತನಗೆ ಸಲಹೆ ನೀಡಿದರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ತಮಿಳಿಸೈ ಸೌಂದರರಾಜನ್, "2024ರ ಸಾರ್ವತ್ರಿಕ ಚುನಾವಣೆಯ ನಂತರ ನಾನು ಮೊದಲು ಬಾರಿಗೆ ಮಾನ್ಯ ಗೃಹ ಸಚಿವ ಅಮಿತ್ ಶಾರನ್ನು ಆಂಧ್ರಪ್ರದೇಶದಲ್ಲಿ ಭೇಟಿಯಾದೆ. ಅವರು ಚುನಾವಣೋತ್ತರ ಪರಿಸ್ಥಿತಿ ಹಾಗೂ ಚುನಾವಣೆಯಲ್ಲಿ ಎದುರಿಸಿದ ಸವಾಲುಗಳನ್ನು ಕುರಿತು ನನ್ನನ್ನು ಪ್ರಶ್ನಿಸಿದರು. ನಾನು ಈ ಕುರಿತು ವಿವರಿಸುವಾಗ, ಸಮಯದ ಕೊರತೆ ಇದ್ದುದರಿಂದ ಅವರು ತೀವ್ರ ಕಾಳಜಿಯೊಂದಿಗೆ ರಾಜಕೀಯ ಹಾಗೂ ಕ್ಷೇತ್ರದ ಕೆಲಸಗಳನ್ನು ತೀವ್ರವಾಗಿ ಮುಂದುವರಿಸಿಕೊಂಡು ಹೋಗುವಂತೆ ನನಗೆ ಸಲಹೆ ನೀಡಿದರು. ಆ ಸನ್ನಿವೇಶದ ಸುತ್ತ ಸೃಷ್ಟಿಯಾಗಿರುವ ವದಂತಿಗಳ ಕುರಿತು ಸ್ಪಷ್ಟೀಕರಣ ನೀಡಲು ನಾನು ಈ ಪೋಸ್ಟ್ ಮಾಡಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಹೀನಾಯ ಪರಾಭವ ಎದುರಿಸಿತ್ತು. ಇದರ ಬೆನ್ನಿಗೇ ತಮಿಳುನಾಡು ಬಿಜೆಪಿ ಘಟಕದ ಮುಖ್ಯಸ್ಥ ಕೆ.ಅಣ್ಣಾಮಲೈ ವಿರುದ್ಧ ಪಕ್ಷದೊಳಗೆ ಭಿನ್ನಮತ ಸ್ಪೋಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ, ತಮಿಳುನಾಡು ಬಿಜೆಪಿ ನಾಯಕಿ ತಮಿಳಿಸೈ ಸೌಂದರ ರಾಜನ್‌ಗೆ ಎಚ್ಚರಿಕೆ ನೀಡಿರುವಂತಿದೆ ಎಂದು ಹಲವಾರು ಮಾಧ್ಯಮ ಸಂಸ್ಥೆಗಳು ವರದಿ ಮಾಡಿದ್ದವು.