ಮಕ್ಕಳ ನಾಪತ್ತೆ ಪ್ರಕರಣ | 24 ಗಂಟೆ ಕಾಯದೆ ತಕ್ಷಣ ಶೋಧ ಆರಂಭಿಸಿ ; ಪೊಲೀಸರಿಗೆ ದಿಲ್ಲಿ ಹೈಕೋರ್ಟ್ ನಿರ್ದೇಶನ
ಹೊಸದಿಲ್ಲಿ : ಮಕ್ಕಳ ನಾಪತ್ತೆ ಪ್ರಕರಣಗಳಲ್ಲಿ ಒಂದು ದಿನ ಕಾಯದೆ ತಕ್ಷಣ ಶೋಧ ಕಾರ್ಯಾಚರಣೆ ಆರಂಭಿಸುವಂತೆ ದಿಲ್ಲಿ ಹೈಕೋರ್ಟ್ ದಿಲ್ಲಿ ಪೊಲೀಸರಿಗೆ ನಿರ್ದೇಶನ ನೀಡಿದೆ. ನಾಪತ್ತೆ ಪ್ರಕರಣಗಳಲ್ಲಿ, ಮೊದಲ 24 ಗಂಟೆಗಳು ಅತ್ಯಂತ ಮಹತ್ವದ ಘಟ್ಟವಾಗಿದ್ದು, ಈ ಹಂತದಲ್ಲಿ ತನಿಖೆ ಮಾಡಿದರೆ ಧನಾತ್ಮಕ ಫಲಿತಾಂಶ ಸಿಗಬಹುದಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನಾಪತ್ತೆಯಾಗಿರುವ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಅಥವಾ ಸಂಬಂಧಿಕರೊಂದಿಗೆ ಹೋಗಿರಬಹುದು ಹಾಗೂ ತಮ್ಮ ಮನೆಗಳಿಗೆ ಹಿಂದಿರುಗಬಹುದು ಎಂಬ ಕಾರಣಕ್ಕಾಗಿ ಒಂದು ದಿನ ಕಾಯುವ ನಿಯಮವಿದೆಯಾದರೂ, ಈ ವಿಳಂಬದ ಅವಧಿಯಲ್ಲಿ ಅಪಹರಣಕಾರರು ಮಕ್ಕಳನ್ನು ದೂರ ಒಯ್ಯುವ ಅಥವಾ ಏನಾದರೂ ಅನಪೇಕ್ಷಿತ ಘಟನೆ ನಡೆಯುವ ಸಾಧ್ಯತೆ ಇದೆ ಎಂದು ನ್ಯಾಯಮೂರ್ತಿಗಳಾದ ಪ್ರತಿಭಾ ಎಮ್ ಸಿಂಗ್ ಮತ್ತು ಅಮಿತ್ ಶರ್ಮ ಅವರನ್ನೊಳಗೊಂಡ ನ್ಯಾಯಪೀಠವೊಂದು ಹೇಳಿತು.
ಈ ಕಾಯುವ ಅವಧಿಯು ಅನಗತ್ಯವಾಗಿದೆ ಎಂದು ನ್ಯಾಯಾಲಯ ಹೇಳಿತು.
‘‘ಹಾಗಾಗಿ, ಅಪ್ರಾಪ್ತ ವಯಸ್ಕನಾಗಲಿ, ಪ್ರಾಪ್ತ ವಯಸ್ಕನಾಗಲಿ ಮಗುವೊಂದು ನಾಪತ್ತೆಯಾದಾಗ, 24 ಗಂಟೆ ಕಾಯುವುದೆಂದರೆ ಅಮುಲ್ಯ ಸಮಯವನ್ನು ವ್ಯಯಿಸಿದಂತೆ. ಆದುದರಿಂದ ಪೊಲೀಸರು ಅಥವಾ ತನಿಖಾ ಸಂಸ್ಥೆಗಳು ದೂರು ದಾಖಲಾದ ತಕ್ಷಣ ತನಿಖೆ ಆರಂಭಿಸುವುದು ಅತ್ಯಂತ ಮುಖ್ಯವಾಗಿದೆ’’ ಎಂದು ತನ್ನ ಜುಲೈ 9ರ ಆದೇಶದಲ್ಲಿ ದಿಲ್ಲಿ ಹೈಕೋರ್ಟ್ ಹೇಳಿದೆ. ಆದೇಶವನ್ನು ಗುರುವಾರ ವೆಬ್ಸೈಟ್ಗೆ ಹಾಕಲಾಗಿದೆ.
ಫೆಬ್ರವರಿಯಿಂದ ನಾಪತ್ತೆಯಾಗಿರುವ ಬಾಲಕಿಯೊಬ್ಬಳ ತಂದೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ. ಫೆಬ್ರವರಿ 19ರಂದು ಮಗಳು ನಾಪತ್ತೆಯಾದ ಬಳಿಕ, ದೂರು ಸಲ್ಲಿಸಲು ಪೊಲೀಸ್ ಠಾಣೆಗೆ ಹೋದೆ, ಆದರೆ, ಮಗಳು ಬಾರದಿದ್ದರೆ ನಾಳೆ ಬನ್ನಿ ಎಂದು ಪೊಲೀಸರು ಹೇಳಿದರು ಎಂದು ಅವರು ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.