ಹರ್ಯಾಣದಲ್ಲಿ ಅಧಿಕಾರಕ್ಕೆ ಕಾಂಗ್ರೆಸ್ ಶತಪ್ರಯತ್ನ: ಎರಡು ಪಂದ್ಯಗಳ ಸರಣಿಯಲ್ಲಿ ಬಿಜೆಪಿಗೆ ಅಗ್ನಿಪರೀಕ್ಷೆ
ಹೊಸದಿಲ್ಲಿ: ನರೇಂದ್ರ ಮೋದಿ ರಾಷ್ಟ್ರಮಟ್ಟದಲ್ಲಿ ನಾಯಕನಾಗಿ ರೂಪುಗೊಳ್ಳುವವರೆಗೂ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಹರ್ಯಾಣದಲ್ಲಿ ಹತ್ತು ವರ್ಷಗಳ ಬಿಜೆಪಿ ಆಡಳಿತವನ್ನು ಕೊನೆಗೊಳಿಸಲು ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶತಪ್ರಯತ್ನಕ್ಕೆ ಮುಂದಾಗಿದೆ.
ಕಳೆದ ಲೋಕಸಭಾ ಚುನಾವಣೆಗೆ ಮುನ್ನವೇ ನಿರುದ್ಯೋಗ, ಬೆಲೆ ಏರಿಕೆ, ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳ ಸುತ್ತ ಗಿರಕಿ ಹೊಡೆಯುತ್ತಿರುವ ಪ್ರಬಲ ಅಧಿಕಾರ ವಿರೋಧಿ ಅಲೆಯನ್ನು ಗುರುತಿಸಿರುವ ಬಿಜೆಪಿ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರನ್ನು ಪದಚ್ಯುತಗೊಳಿಸಿ ನಯಾಬ್ ಸಿಂಗ್ ಸೈನಿಯವರನ್ನು ನೂತನ ಮುಖ್ಯಮಂತ್ರಿಯಾಗಿ ನೇಮಿಸಿತ್ತು.
ಆದರೆ 2019ರಲ್ಲಿ 10 ಲೋಕಸಭಾ ಕ್ಷೇತ್ರಗಳ ಪೈಕಿ ಶೂನ್ಯ ಸಾಧನೆ ಮಾಡಿದ್ದ ಹಾಗೂ 2014ರಲ್ಲಿ ಕೇವಲ 1 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಐದು ಸ್ಥಾನಗಳನ್ನು ಗೆದ್ದಿರುವುದು ಬಿಜೆಪಿಯ ನಿದ್ದೆಗೆಡಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯುವ ಪ್ರಯತ್ನದಲ್ಲಿದ್ದು, ವಿಧಾನಸಭಾ ಚುನಾವಣೆಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ನಿರೀಕ್ಷೆ ಪಕ್ಷದ ಮುಖಂಡರದಲ್ಲಿದೆ.
ದಶಕಗಳ ಕಾಲದಿಂದ ಇದ್ದ ಅಧಿಕಾರ ವಿರೋಧಿ ಅಲೆಯಿಂದಾಗಿ, ಕೇಂದ್ರದಲ್ಲಿ 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ತಿಂಗಳಲ್ಲಿ ಕಾಂಗ್ರೆಸ್ ಈ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿತ್ತು. ಪುಲ್ವಾಮಾ ಘಟನೆ ಬಳಿಕ ನಡೆದ ಲೋಕಸಭಾ ಮತ್ತು ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ನಿರಾಸೆ ಅನುಭವಿಸಬೇಕಾಯಿತು. ಬಿಜೆಪಿ 40 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡರೂ, ಜೆಜೆಪಿ ಜತೆ ಮೈತ್ರಿ ಸಾಧಿಸಿ ಸರ್ಕಾರ ರಚಿಸಿತು. ಆದರೆ ಅಯೋಧ್ಯೆ ರಾಮ ಮಂದಿರ ನಿರ್ಮಾಣದಂತಹ ಧ್ರುವೀಕರಣ ಅಂಶದ ನಡುವೆಯೂ ಅರ್ಧದಷ್ಟು ಲೋಕಸಭಾ ಕ್ಷೇತ್ರವನ್ನು ಈ ಬಾರಿ ಗೆದ್ದಿರುವ ಕಾಂಗ್ರೆಸ್ ಆತ್ಮವಿಶ್ವಾಸ ವೃದ್ಧಿಸಿದೆ.