ಕ್ರಿಕೆಟಿಗ ರವೀಂದ್ರ ಜಡೇಜಾ ಬಿಜೆಪಿ ಸೇರ್ಪಡೆ

Update: 2024-09-05 13:08 GMT

ರವೀಂದ್ರ ಜಡೇಜಾ, ರಿವಾಬಾ ಜಡೇಜಾ | PC: PTI

ಹೊಸದಿಲ್ಲಿ: ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾ ಭಾರತೀಯ ಜನತಾ ಪಕ್ಷಕ್ಕೆ (BJP) ಸೇರ್ಪಡೆಯಾಗಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಶಾಸಕಿ ಹಾಗೂ ರವೀಂದ್ರ ಜಡೇಜಾರ ಪತ್ನಿ ರಿವಾಬಾ ಜಡೇಜಾ, ರವೀಂದ್ರ ಜಡೇಜಾ ಬಿಜೆಪಿ ಕುಟುಂಬದ ನೂತನ ಸದಸ್ಯರಾಗಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಪ್ರಕಟಿಸಿದ್ದಾರೆ. ಈ ಪೋಸ್ಟ್ ನೊಂದಿಗೆ ರಿವಾಬಾ ತಮ್ಮ ಹಾಗೂ ತಮ್ಮ ಪತಿಯ ಭಾವಚಿತ್ರ ಮತ್ತು ಅವರಿಬ್ಬರ ಬಿಜೆಪಿ ಸದಸ್ಯತ್ವದ ಚೀಟಿಯನ್ನೂ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಸೆಪ್ಟೆಂಬರ್ 2ರಂದು ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸದಸ್ಯತ್ವವನ್ನು ನವೀಕರಿಸುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದ್ದರು.

2019ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ರಿವಾಬಾ, 2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಜಾಮ್ ನಗರ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ ಆಪ್ ಅಭ್ಯರ್ಥಿ ಕರ್ಶನ್ ಭಾಯಿ ಕರ್ಮೂರ್ ಅವರನ್ನು ಪರಾಭವಗೊಳಿಸುವ ಮೂಲಕ ರಿವಾಬಾ ಜಯಶಾಲಿಯಾಗಿದ್ದರು.

ಜೂನ್ ನಲ್ಲಿ ನಡೆದಿದ್ದ ಟಿ-20 ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಭಾರತ ತಂಡವು ವಿಶ್ವಕಪ್ ಚಾಂಪಿಯನ್ ಆದ ನಂತರ 35 ವರ್ಷ ವಯಸ್ಸಿನ ರವೀಂದ್ರ ಜಡೇಜಾ ಟಿ-20 ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News