ಅರವಿಂದ್ ಕೇಜ್ರಿವಾಲ್ ಬಿಡುಗಡೆಗೆ ತಡೆ ನೀಡಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮಂಜೂರು ಮಾಡಿರುವ ಜಾಮೀನನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯವು ಸಲ್ಲಿಸಿರುವ ತುರ್ತು ಅರ್ಜಿ ಆಲಿಸಿದ ದಿಲ್ಲಿ ಹೈಕೋರ್ಟ್, ಅರವಿಂದ್ ಕೇಜ್ರಿವಾಲ್ ರ ಬಿಡುಗಡೆಗೆ ತಡೆ ನೀಡಿದೆ.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ 1 ಲಕ್ಷ ರೂ. ಬಾಂಡ್‌ನ ಮೇಲೆ ದಿಲ್ಲಿಯ ರೌಸ್ ಅವೆನ್ಯೂ ನ್ಯಾಯಾಲಯ ಗುರುವಾರ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಇಂದು ಈಡಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಜಾರಿ ನಿರ್ದೇಶನಾಲಯದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಸಲ್ಲಿಸಿದ್ದ ತುರ್ತು ಅರ್ಜಿಯ ವಿಚಾರಣೆಯು ನ್ಯಾ. ಸುಧೀರ್ ಕುಮಾರ್ ಜೈನ್ ಹಾಗೂ ರವೀಂದರ್ ದುದೇಜ ಅವರನ್ನೊಳಗೊಂಡ ರಜಾಪೀಠದ ಮುಂದೆ ಬಂದಿದೆ.
ಅರವಿಂದ್ ಕೇಜ್ರಿವಾಲ್ ಅವರಿಗೆ ವಿಚಾರಣಾ ನ್ಯಾಯಾಲಯವು ಮಂಜೂರು ಮಾಡಿರುವ ಜಾಮೀನಿಗೆ ತಡೆ ನೀಡಬೇಕು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ನ್ಯಾಯಾಲಯದ ಮುಂದೆ ವಾದ ಮಂಡಿಸಿದರು. ಆದರೆ, ಈ ವಾದವನ್ನು ಅರವಿಂದ್ ಕೇಜ್ರಿವಾಲ್ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಿರೋಧಿಸಿದರು.
ವಾದ ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್, ಈ ವಿಚಾರದ ಕುರಿತು ನ್ಯಾಯಾಲಯವು ವಿಚಾರಣೆ ನಡೆಸುವವರೆಗೂ, ಜಾಮೀನು ಆದೇಶವನ್ನು ಜಾರಿಗೊಳಿಸಲು ಅವಕಾಶ ನೀಡಬಾರದು ಎಂದು ಸೂಚಿಸಿತು.
ತದನಂತರ, ಈ ಅರ್ಜಿಯನ್ನು ಇಂದು ವಿಚಾರಣೆ ನಡೆಸಲು ನ್ಯಾಯಾಲಯವು ಪಟ್ಟಿ ಮಾಡಿತು.