ನ್ಯೂಸ್‌ಕ್ಲಿಕ್ ಮೇಲೆ ಮುಂದುವರಿದ ದಾಳಿ: ಮಾಜಿ ಉದ್ಯೋಗಿಯ ಲ್ಯಾಪ್‌ಟಾಪ್, ಮೊಬೈಲ್ ವಶ
ತಿರುವನಂತಪುರ: ಚೀನಾ ಪರ ಅಜೆಂಡಾ ಪ್ರಚಾರ ಮಾಡುವ ಸಂಸ್ಥೆಯಿಂದ ಹಣ ಪಡೆದಿದ್ದಾರೆ ಎಂದು ಆರೋಪಿಸಿ ಸುದ್ದಿ ಸಂಸ್ಥೆ ನ್ಯೂಸ್‌ಕ್ಲಿಕ್‌ನ ಮೇಲೆ ದಾಳಿ ಆರಂಭಿಸಿರುವ ದಿಲ್ಲಿ ಪೊಲೀಸರು, ಕೇರಳದ ಪತ್ತನಂತಿಟ್ಟದ ಕೊಡುಮೊನ್ ಬಳಿಯ ನ್ಯೂಸ್ ಪೋರ್ಟಲ್‌ನ ಮಾಜಿ ಉದ್ಯೋಗಿ ಅನುಷಾ ಪೌಲ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಅನುಷಾ ಪೌಲ್ ಅವರ ಲ್ಯಾಪ್‌ಟಾಪ್ ಮತ್ತು ಫೋನ್ ಅನ್ನು ಪರಿಶೀಲನೆಗಾಗಿ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ದಿಲ್ಲಿ ಪೊಲೀಸರ ಮೂವರು ಸದಸ್ಯರ ತಂಡ ತನ್ನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದೆ ಎಂದು ಅನುಷಾ ತಿಳಿಸಿದ್ದಾರೆ.
ನ್ಯೂಸ್‌ಕ್ಲಿಕ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಜೊತೆಗಿನ ಸಂಬಂಧದ ಬಗ್ಗೆ ತನ್ನನ್ನು ಪ್ರಶ್ನಿಸಲಾಯಿತು. ರೈತರ ಪ್ರತಿಭಟನೆಗಳು, ಪೌರತ್ವ (NRC-CAA) ತಿದ್ದುಪಡಿ ಕಾಯ್ದೆ ಪ್ರತಿಭಟನೆಗಳು ಹಾಗೂ ಕೇಂದ್ರದ ಕೋವಿಡ್ -19 ನಿರ್ವಹಣೆಯ ಬಗ್ಗೆ ಅವರು ವರದಿ ಮಾಡಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದಾರೆ ಎಂದು ಪತ್ರಕರ್ತೆ ಹೇಳಿಕೊಂಡಿದ್ದಾರೆ.
ನರೇಂದ್ರ ಮೋದಿ ಸರ್ಕಾರ ಮತ್ತು ಆರೆಸ್ಸೆಸ್ ವಿರುದ್ಧ ಧ್ವನಿ ಎತ್ತುತ್ತಿದ್ದ ಸಂಸ್ಥೆ ಮತ್ತು ಅದರ ಉದ್ಯೋಗಿಗಳಿಗೆ ಬೆದರಿಕೆ ಹಾಕಲು ಮಾಡುತ್ತಿರುವ ಬೇಟೆಯಾಗಿದೆ ಎಂದು ಅನುಷಾ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಸಿಪಿಐ(ಎಂ)ನ ದಿಲ್ಲಿ ರಾಜ್ಯ ಕಾರ್ಯದರ್ಶಿ ಕೆಎಂ ತಿವಾರಿ ಅವರ ಪರಿಚಯ ಇದೆಯೇ ಎಂದು ದಿಲ್ಲಿ ಪೊಲೀಸರು ತನ್ನನ್ನು ಕೇಳಿದರು ಎಂದು ಅವರು ಹೇಳಿದರು.
"ಖಂಡಿತ, ನಾನು ಅವರನ್ನು ಬಲ್ಲೆ. ಅವರು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ. ನಾನು ಸಿಪಿಐ(ಎಂ) ಕಾರ್ಯಕರ್ತೆ. ನಾನು ಡಿವೈಎಫ್‌ಐ ದಿಲ್ಲಿ ಘಟಕದ ರಾಜ್ಯ ಸಮಿತಿ ಸದಸ್ಯೆ ಮತ್ತು ಅದರ ರಾಜ್ಯ ಖಜಾಂಚಿ," ಎಂದು ಅವರು ತಿಳಿಸಿದರು.