ಬಿಹಾರದಲ್ಲಿ ಅವಧಿಪೂರ್ವ ಚುನಾವಣೆ: ಜೆಡಿಯು ಸುಳಿವು

Update: 2025-02-23 08:00 IST
ಬಿಹಾರದಲ್ಲಿ ಅವಧಿಪೂರ್ವ ಚುನಾವಣೆ: ಜೆಡಿಯು ಸುಳಿವು

PC: x.com/VijayKChy

  • whatsapp icon

ಪಾಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಗತಿಯಾತ್ರೆ ಪೂರ್ಣಗೊಳಿಸಿದ ಮರುದಿನವೇ, ಯಾವುದೇ ಕ್ಷಣದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಎದುರಿಸಲು ಎನ್ ಡಿಎ ಸಜ್ಜಾಗಿದೆ ಎಂದು ಜೆಡಿಯು ಮುಖಂಡ ಹಾಗೂ ಸಚಿವ ವಿಜಯ ಕುಮಾರ್ ಚೌಧರಿ ಹೇಳಿಕೆ ನೀಡಿದ್ದಾರೆ. ಬಿಹಾರದಲ್ಲಿ ಅವಧಿಪೂರ್ವ ಚುನಾವಣೆಗೆ ಎನ್ ಡಿಎ ಸಜ್ಜಾಗುತ್ತಿದೆ ಎಂದು ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಹೇಳಿಕೆ ನೀಡಿರುವುದು ಹಲವು ವದಂತಿಗಳಿಗೆ ಕಾರಣವಾಗಿದೆ.

"ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಿಸಲು ಎನ್ ಡಿಎ ಸಜ್ಜಾಗಿದೆ. ಯಾವಾಗ ಚುನಾವಣೆ ನಡೆಸಬೇಕು ಎಂದು ನಿರ್ಧರಿಸುವುದು ಚುನಾವಣಾ ಆಯೋಗಕ್ಕೆ ಬಿಟ್ಟದ್ದು" ಎಂದು ಹೇಳಿದರು. ವಾಸ್ತವವಾಗಿ ಅಕ್ಟೋಬರ್-ನವೆಂಬರ್ ನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಬೇಕಿದೆ.

ಈ ತಿಂಗಳ 24ರಂದು ಭಗಲ್ಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಚಿವರ ಹೇಳಿಕೆ ವಿಶೇಷ ಮಹತ್ವ ಪಡೆದಿದೆ. 24ರಂದು ಪ್ರಧಾನಿಯವರು ಕಿಸಾನ್ ಸನ್ಮಾನ್ ನಿಧಿ ಯೋಜನೆಯ 19ನೇ ಕಂತನ್ನು ಬಿಡುಗಡೆ ಮಾಡುವರು. ಜತೆಗೆ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುವರು ಎಂದು ಹೇಳಲಾಗಿದೆ.

ನಿತೀಶ್ ಕುಮಾರ್ಗೆ ಬದಲಿ ಮುಖಂಡರು ಇಲ್ಲ ಎನ್ನುವ ಅರಿವು ವಿರೋಧ ಪಕ್ಷಗಳಿಗೆ ಇದೆ ಎಂದು ಅವರು ಚುಚ್ಚಿದ್ದಾರೆ. ಎಲ್ಲ 38 ಜಿಲ್ಲೆಗಳಲ್ಲಿ ಸಂಚರಿಸಿರುವ ಪ್ರಗತಿಯಾತ್ರೆಗೆ ಅದ್ಭುತ ಸ್ಪಂದನೆ ಸಿಕ್ಕಿದ್ದು, ಎನ್ ಡಿಎ ಪರ ಜನರ ಉತ್ಸಾಹಕ್ಕೆ ಉತ್ತೇಜನ ನೀಡಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News