ಕೇಜ್ರಿವಾಲ್ ಜಾಮೀನು ಪ್ರಶ್ನಿಸಿ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ ಜಾರಿ ನಿರ್ದೇಶನಾಲಯ
ಹೊಸದಿಲ್ಲಿ : ದಿಲ್ಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರಿಗೆ ವಿಚಾರಣಾ ನ್ಯಾಯಾಲಯವು ನೀಡಿರುವ ಜಾಮೀನಿಗೆ ದಿಲ್ಲಿ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ. ವಿಚಾರಣಾ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಅನುಷ್ಠಾನ ನಿರ್ದೇಶನಾಲಯ (ಈಡಿ) ಸಲ್ಲಿಸಿರುವ ಅರ್ಜಿಯ ಕುರಿತ ತೀರ್ಪನ್ನು ತಾನು ಘೋಷಿಸುವವರೆಗೆ ತಡೆಯಾಜ್ಞೆ ಜಾರಿಯಲ್ಲಿರುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಕೇಜ್ರಿವಾಲ್‌ರಿಗೆ ಜಾಮೀನು ನೀಡುವ ವಿಚಾರಣಾ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ಕೋರಿ ಅನುಷ್ಠಾನ ನಿರ್ದೇಶನಾಲಯವು ಸಲ್ಲಿಸಿರುವ ಅರ್ಜಿಯ ಬಗ್ಗೆ ತೀರ್ಪು ನೀಡಲು ತನಗೆ ಎರಡು-ಮೂರು ದಿನಗಳು ಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್‌ರನ್ನು ಒಳಗೊಂಡ ಹೈಕೋರ್ಟ್‌ನ ರಜಾಕಾಲದ ನ್ಯಾಯಪೀಠವು ಹೇಳಿತು. ‘‘ಈ ನಡುವೆ, ಅರ್ಜಿದಾರರು (ಈಡಿ) ಮತ್ತು ಪ್ರತಿವಾದಿಗಳು (ಕೇಜ್ರಿವಾಲ್) ತಮ್ಮ ಲಿಖಿತ ಹೇಳಿಕೆಗಳನ್ನು ಸೋಮವಾರದ ಒಳಗೆ ಸಲ್ಲಿಸಬಹುದಾಗಿದೆ’’ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ವಿಚಾರಣೆಯ ವೇಳೆ, ವಿಚಾರಣಾ ನ್ಯಾಯಾಲಯದ ನಿರ್ಧಾರವು ‘‘ಲೋಪದೋಷಗಳಿಂದ ಕೂಡಿದೆ’’ ಮತ್ತು ‘‘ಏಕಪಕ್ಷೀಯವಾಗಿದೆ’’ ಎಂಬುದಾಗಿ ಈಡಿ ಪರ ವಕೀಲ ಎಸ್.ವಿ. ರಾಜು ಬಣ್ಣಿಸಿದರು.
‘‘ದಾಖಲೆಗಳನ್ನು ಪರಿಗಣಿಸದೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ದಾಖಲೆಗಳನ್ನು ಪರಿಶೀಲಿಸದೆಯೇ, ಅವುಗಳು ಸಾಂದರ್ಭಿಕವೇ, ಅಲ್ಲವೇ ಎಂಬ ನಿರ್ಧಾರಕ್ಕೆ ಬರಲು ಹೇಗೆ ಸಾಧ್ಯ? ದಾಖಲೆಗಳನ್ನು ಪರಿಶೀಲಿಸದೆಯೇ, ಅವುಗಳು ‘ಸಾಂದರ್ಭಿಕವಲ್ಲ’ ಎಂದು ಹೇಗೆ ಹೇಳಲು ಸಾಧ್ಯ? ಇದು ವಿಕೃತ ನಿರ್ಧಾರವಾಗಿದೆ’’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜು ಹೇಳಿದರು.
ಅನುಷ್ಠಾನ ನಿರ್ದೇಶನಾಲಯದ ವಕೀಲರ ವಾದವನ್ನು ಕೇಜ್ರಿವಾಲ್ ಪರ ವಕೀಲ ಅಭಿಶೇಕ್ ಮನು ಸಿಂಘ್ವಿ ವಿರೋಧಿಸಿದರು.
‘‘ಅನುಷ್ಠಾನ ನಿರ್ದೇಶನಾಲಯದ ವಾದವನ್ನು ವಿಚಾರಣಾ ನ್ಯಾಯಾಲಯವು ಕೊನೆಯಿಲ್ಲದೆ ಕೇಳಬೇಕಾಗಿತ್ತು ಮತ್ತು ತನ್ನ ತೀರ್ಪು ಬರೆಯುವಾಗ ಪ್ರಬಂಧ ಬರೆಯಬೇಕಾಗಿತ್ತು ಎಂಬ ಕೇಂದ್ರೀಯ ತನಿಖಾ ಸಂಸ್ಥೆಯ ನಿಲುವು ವಿಷಾದಕರ ಮತ್ತು ದುಃಖದಾಯಕ. ಇಂಥ ಮಾತುಗಳನ್ನು ಖಾಸಗಿ ಸಂಸ್ಥೆಯೊಂದು ಹೇಳಬಹುದು. ಆದರೆ ಸರಕಾರಿ ಪ್ರಾಧಿಕಾರವೊಂದರಿಂದ ಇಂಥ ಮಾತುಗಳು ಬರಬಾರದಾಗಿತ್ತು. ಆದರೆ, ಅನುಷ್ಠಾನ ನಿರ್ದೇಶನಾಲಯದ ಮಟ್ಟಿಗೆ ಹೇಳುವುದಾದರೆ, ಈ ಶಾಸನಾತ್ಮಕ ಸಂಸ್ಥೆಯ ಶಾಸನಾತ್ಮಕ ಗುರಿ ಎಂದೋ ಕಳೆದುಹೋಗಿದೆ’’ ಎಂದು ಸಿಂಘ್ವಿ ವಾದಿಸಿದರು.
‘‘‘‘ಆಲಿಸ್ ಇನ್ ವಂಡರ್‌ಲ್ಯಾಂಡ್’’ನಂತೆ, ವಿಕೃತತಗೆ ಈಡಿಯು ತನ್ನದೇ ಆಗಿರುವ ಅರ್ಥವನ್ನು ಹೊಂದಿದೆ. ಅವರು ತಪ್ಪನ್ನು ವಿಕೃತತೆ ಎಂದು ಕರೆಯುತ್ತಾರೆ. ಅನುಷ್ಠಾನ ನಿರ್ದೇಶನಾಲಯದ ಪ್ರತಿ ವಾದದ ಪ್ರತಿಯೊಂದು ಪದವನ್ನು ಉಲ್ಲೇಖಿಸದಿದ್ದರೆ, ಅವರು ಅದನ್ನು ವಿಕೃತ ಎಂದು ಕರೆಯುತ್ತಾರೆ’’ ಎಂದು ಕೇಜ್ರಿವಾಲ್‌ರ ವಕೀಲರು ಹೇಳಿದರು.
ವಿಕೃತತೆಗೆ ತನ್ನದೇ ಆದ ಅರ್ಥವನ್ನು ಕೊಡುವ ಮೂಲಕ ಅನುಷ್ಠಾನ ನಿರ್ದೇಶನಾಲಯವು ಕಾನೂನನ್ನು ತಿರುಚುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಅವರು ಆರೋಪಿಸಿದರು.
‘‘ಕಾನೂನನ್ನು ತಿರುಚುವುದೇ ಅನುಷ್ಠಾನ ನಿರ್ದೇಶನಾಲಯದ ಉದ್ದೇಶವಾಗಿದ್ದರೆ, ವ್ಯಕ್ತಿ ಸ್ವಾತಂತ್ರ್ಯಕ್ಕೆ ತೀವ್ರ ಧಕ್ಕೆಯಾಗುತ್ತದೆ. ಅದರ ಈ ಮನೋಭಾವವು ಕಾನೂನನ್ನು ಬುಡಮೇಲುಗೊಳಿಸಲು ಪ್ರಯತ್ನಿಸುತ್ತದೆ. ವಿಚಾರಣಾ ನ್ಯಾಯಾಲಯದ ತೀರ್ಪಿನಲ್ಲಿರುವ ಅಕ್ಷರ ತಪ್ಪುಗಳ ಪ್ರಯೋಜನವನ್ನು ಈಡಿ ಪಡೆಯುತ್ತಿದೆ’’ ಎಂದು ಸಿಂಘ್ವಿ ವಾದಿಸಿದರು.