ನಕಲಿ ವಿಡಿಯೋ ಬಳಸಿ ಮುಸ್ಲಿಮರ ವಿರುದ್ಧ ದ್ವೇಷಕಾರುವ ಟ್ವೀಟ್ | ಬಲಪಂಥೀಯ ಎಕ್ಸ್ ಬಳಕೆದಾರ ಸಿನ್ಹಾ, ವಿನೋದ್ ವಿರುದ್ಧ ಎಫ್ ಐ ಆರ್ ದಾಖಲು
ಹೊಸದಿಲ್ಲಿ : ಬಲಪಂಥೀಯ ಎಕ್ಸ್ ಜಾಲತಾಣ ಬಳಕೆದಾರರಾದ ಸಿನ್ಹಾ ಮತ್ತು ವಿನೋದ್ ಅವರ ಮೇಲೆ ಅಣಕು ವೀಡಿಯೊವೊಂದನ್ನು ನಿಜವಾದ ವಿಡಿಯೋ ಎಂಬಂತೆ ಬಿಂಬಿಸಿ, ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಟ್ವೀಟ್ ಮಾಡಿದ್ದಕ್ಕಾಗಿ ಎಫ್ ಐ ಆರ್ ದಾಖಲಾಗಿದೆ.
ತೆಲಂಗಾಣದ ಹೈದರಾಬಾದ್ ನಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಮುಸ್ಲಿಂ ವ್ಯಕ್ತಿಯೊಬ್ಬ ಸಿಹಿತಿಂಡಿಗಳ ಪಾತ್ರೆಯಲ್ಲಿ ಮೂತ್ರ ವಿಸರ್ಜಿಸುತ್ತಿದ್ದಾನೆ ಎಂದು ಈ ಇಬ್ಬರು ತಮಾಷೆ ಗಾಗಿ ಮಾಡುವ ಅಣಕು ವೀಡಿಯೊ ಬಳಸಿ ಪೋಸ್ಟ್ ಮಾಡಿದ್ದರು. ಪೋಸ್ಟ್ ವೈರಲಾಗುತ್ತಿದ್ದಂತೆ ಸಿನ್ಹಾ ಅದನ್ನು ಅಳಿಸಿ ಹಾಕಿದ್ದರು. ವಿನೋದ್ ಅವರ ಸ್ಟ್ರಿಂಗ್ ಹೆಸರಿನ ಖಾತೆಯಲ್ಲಿ ಪೋಸ್ಟ್ ಇನ್ನೂ ಇದೆ.
ಉತ್ತರ ಪ್ರದೇಶದ ಕನ್ವರ್ ಯಾತ್ರೆಯ ಮಾರ್ಗದ ಉದ್ದಕ್ಕೂ ಇರುವ ಮಳಿಗೆಗಳಲ್ಲಿ, ಭಕ್ತರಲ್ಲಿ ಗೊಂದಲವನ್ನು ತಡೆಗಟ್ಟಲು ತಮ್ಮ ಮಾಲೀಕರು ಮತ್ತು ಉದ್ಯೋಗಿಗಳ ಹೆಸರನ್ನು ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಸರಕಾರ ಆದೇಶಿಸಿತ್ತು. ಉತ್ತರಾಖಂಡ ರಾಜ್ಯದ ಹರಿದ್ವಾರ ಪೊಲೀಸರೂ ಇದೇ ರೀತಿಯ ಸೂಚನೆ ನೀಡಿದ್ದಾರೆ.
ಇದು ಮುಸ್ಲಿಮರ ಮಾಲಕತ್ವದ ತಿಂಡಿ ಮಳಿಗೆಗಳನ್ನು ಗುರುತಿಸಲು ನೀಡಿರುವ ಆದೇಶ ಎಂದು ಆಕ್ರೋಶ ವ್ಯಕ್ತವಾಗಿತ್ತು. ಅದರ ಬೆನ್ನಿಗೇ, ಈ ಇಬ್ಬರು ಬಲಪಂಥೀಯ ಎಕ್ಸ್ ಬಳಕೆದಾರರು ಈ ರೀತಿಯ ದ್ವೇಷ ಕಾರುವ, ಸುಳ್ಳಾರೋಪದ ಟ್ವೀಟ್ ಹಂಚಿಕೊಂಡಿದ್ದರು.
ಸಿನ್ಹಾ ತಮ್ಮ ಎಕ್ಸ್ ಖಾತೆಯಲ್ಲಿ, ಈ ವೀಡಿಯೊ ಪೋಸ್ಟ್ ಮಾಡಿ ಅದನ್ನು ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಅವರಿಗೆ ಟ್ಯಾಗ್ ಮಾಡಿ, ನೀವಿದನ್ನು ತಿನ್ನುವಿರೇ? ಮೊದಲು ನೀವು ತಿಂದು ಬಳಿಕ ನಮಗೆ ತಿನ್ನಲು ಒತ್ತಾಯಿಸಿ ಎಂದು ತಿಳಿಸಿದ್ದರು. ವಿನೋದ್ ಅವರು ಸ್ಟ್ರಿಂಗ್ ಹೆಸರಿನ ಖಾತೆಯಲ್ಲಿ ಅದೇ ವಿಡಿಯೋ ಪೋಸ್ಟ್ ಮಾಡಿ, ತೆಲಂಗಾಣದ ವಾರಂಗಲ್ ನಲ್ಲಿ ಮುಸ್ಲಿಮರು ನಡೆಸುತ್ತಿರುವ ಹೊಟೇಲ್ ನಲ್ಲಿ ಆಹಾರದ ಮೇಲೆ ಮೂತ್ರ ವಿಸರ್ಜನೆ ಎಂದು ಪೋಸ್ಟ್ ಮಾಡಿದ್ದರು.
ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಪೊಲೀಸರ ಆದೇಶಕ್ಕೆ ಮುಸ್ಲಿಮರ ವಿರುದ್ಧ ತಾರತಮ್ಯದ ನಡೆ ಎಂದು ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಮುಸ್ಲಿಮರು ಆಹಾರದಲ್ಲಿ ಮೂತ್ರ ವಿಸರ್ಜನೆಯಂತಹ ಆಚರಣೆಗಳಲ್ಲಿ ತೊಡಗುತ್ತಾರೆ ಎಂಬುದನ್ನು ನಿರೂಪಿಸಲು ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.