ಚಂದ್ರಯಾನ-3ರ ಅಂತ್ಯ?: ವಿಕ್ರಮ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಪುನಃಶ್ಚೇತನಗೊಳ್ಳುವ ಭರವಸೆಯಿಲ್ಲ ಎಂದ ಮಾಜಿ ಇಸ್ರೋ ಮುಖ್ಯಸ್ಥ

Update: 2023-10-07 11:14 GMT

Photo:X/@isro

ಹೊಸದಿಲ್ಲಿ: ನಿರೀಕ್ಷೆಯ ದಿನಗಳ ಬಳಿಕ ಈಗ ಚಂದ್ರಯಾನ-3ರ ವಿಕ್ರಮ ಲ್ಯಾಂಡರ್ ಮತ್ತು ಪ್ರಜ್ಞಾನ ರೋವರ್ ಎಚ್ಚರಗೊಳ್ಳುವ ಸಾಧ್ಯತೆಯಿಲ್ಲ ಎಂಬಂತೆ ತೋರುತ್ತಿದೆ. ಬಾಹ್ಯಾಕಾಶ ವಿಜ್ಞಾನಿ ಮತ್ತು ಮಾಜಿ ಇಸ್ರೋ ಮುಖ್ಯಸ್ಥ ಎ.ಎಸ್.ಕಿರಣಕುಮಾರ ಅವರ ಪ್ರಕಾರ ಭಾರತದ ಮೂರನೇ ಚಂದ್ರ ಅಭಿಯಾನ ಪುನಃಶ್ಚೇತನಗೊಳ್ಳುವ ಯಾವುದೇ ಭರವಸೆ ಈಗ ಉಳಿದಿಲ್ಲ.

ಸೆ.22ರಂದು ಚಂದ್ರನಲ್ಲಿ ಹೊಸ ದಿನ ಆರಂಭವಾದ ಬಳಿಕ ಸೌರಶಕ್ತಿ ಚಾಲಿತ ಲ್ಯಾಂಡರ್ ಮತ್ತು ರೋವರ್ ಜೊತೆ ಸಂಪರ್ಕ ಸಾಧಿಸಲು ಪ್ರಯತ್ನಿಸಲಾಗಿತ್ತು,ಆದರೆ ಲ್ಯಾಂಡರ್ ಅಥವಾ ರೋವರ್‌ನಿಂದ ಯಾವುದೇ ಸಂಕೇತಗಳನ್ನು ಸ್ವೀಕರಿಸಲಾಗಿಲ್ಲ ಎಂದು ಇಸ್ರೋ ಹೇಳಿದೆ.

ಲ್ಯಾಂಡರ್ ಮತ್ತು ರೋವರ್ ಪುನಃಶ್ಚೇತನಗೊಳ್ಳುವ ಯಾವುದೇ ಭರವಸೆ ಇಲ್ಲ. ಅದು ಆಗುವುದಿದ್ದರೆ ಇಷ್ಟೊತ್ತಿಗಾಗಲೇ ಆಗುತ್ತಿತ್ತು. ಈಗ ಯಾವುದೇ ಅವಕಾಶವಿಲ್ಲ ಎಂದು ಕಿರಣಕುಮಾರ್ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಆ.23ರಂದು ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದ ಬಳಿ ಸಾಫ್ಟ್ ಲ್ಯಾಂಡಿಂಗ್ ಮಾಡಿದಾಗ ಭಾರತವು ಇತಿಹಾಸವನ್ನು ಸೃಷ್ಟಿಸಿತ್ತು. ಭಾರತವು ಅಮೆರಿಕ,ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ಬಳಿಕ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಸಾಧಿಸಿದ ನಾಲ್ಕನೇ ದೇಶವಾಗಿದೆ.

ಇಸ್ರೋ ಸೆ.22ರಂದು ಮುಂದಿನ ಸೂರ್ಯೋದಯದ ಸಂದರ್ಭದಲ್ಲಿ ಪುನಃಶ್ಚೇತನಗೊಳಿಸುವ ಭರವಸೆಯೊಂದಿಗೆ ಸೆ.4 ಮತ್ತು 2ರಂದು ಚಂದ್ರನಲ್ಲಿ ಸೂರ್ಯಾಸ್ತಕ್ಕೆ ಮುನ್ನ ಲ್ಯಾಂಡರ್ ಮತ್ತು ರೋವರ್ ಅನ್ನು ನಿದ್ರಾಸ್ಥಿತಿಯಲ್ಲಿರಿಸಿತ್ತು. ವಿಕ್ರಮ ಲ್ಯಾಂಡರ್ ಮತ್ತು ಪ್ರಜ್ಞಾನ ರೋವರ್ ಇವೆರಡನ್ನೂ ಚಂದ್ರನ ಇಡೀ ಒಂದು ದಿನ (ಭೂಮಿಯ ಸುಮಾರು 14 ದಿನಗಳು) ಕಾರ್ಯಾಚರಿಸುವಂತೆ ವಿನ್ಯಾಸಗೊಳಿಸಲಾಗಿತ್ತು.

ಈ ನಡುವೆ ಇಸ್ರೋ ಅಧಿಕಾರಿಗಳು ಚಂದ್ರಯಾನ-3 ತನ್ನ ಗುರಿಗಳನ್ನು ಸಾಧಿಸಿದೆ ಎಂದು ಪ್ರತಿಪಾದಿಸಿದ್ದಾರೆ. ಚಂದ್ರನ ಮೇಲ್ಮೈ ಮೇಲೆ ಸುರಕ್ಷಿತವಾದ ಸಾಫ್ಟ್ ಲ್ಯಾಂಡಿಂಗ್ ಮತ್ತು ರೋವರ್‌ನ ಸಂಚಾರವನ್ನು ಸಾಧ್ಯವಾಗಿಸುವುದು ಹಾಗೂ ಚಂದ್ರನ ಮೇಲ್ಮೈ ಮೇಲೆ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಈ ಗುರಿಗಳಾಗಿದ್ದವು. ಲ್ಯಾಂಡಿಂಗ್ ಬಳಿಕ ಲ್ಯಾಂಡರ್ ಮತ್ತು ರೋವರ್‌ನ ವೈಜ್ಞಾನಿಕ ಪೇ ಲೋಡ್‌ಗಳು ಸತತ ಪ್ರಯೋಗಗಳನ್ನು ನಡೆಸಿದ್ದವು ಮತ್ತು 14 ಚಂದ್ರ ದಿನಗಳಲ್ಲಿ ಅವುಗಳನ್ನು ಪೂರ್ಣಗೊಳಿಸಿದ್ದವು.

ವಿಕ್ರಮ ಲ್ಯಾಂಡರ್ ತನ್ನ ಅಭಿಯಾನದ ಗುರಿಗಳನ್ನು ಮೀರಿ ಕಾರ್ಯ ನಿರ್ವಹಿಸಿದೆ ಎಂದು ಸೆ.4ರಂದು ಇಸ್ರೋ ಹೇಳಿತ್ತು. ಲ್ಯಾಂಡರ್ ‘ಕುಪ್ಪಳಿಸುವಿಕೆ ’ ಪರೀಕ್ಷೆಯನ್ನು ಪರಿಣಾಮಕಾರಿಯಾಗಿ ನಡೆಸಿತ್ತು. ಅದು ತನ್ನ ಇಂಜಿನ್‌ಗಳನ್ನು ಚಾಲೂ ಮಾಡಿಕೊಂಡು ಸುಮಾರು 40 ಸೆಂ.ಮೀ.ಗಳಷ್ಟು ಎತ್ತರಕ್ಕೆ ಜಿಗಿದಿತ್ತು ಮತ್ತು ಸುಮಾರು 30-40 ಸೆಂ.ಮೀ.ದೂರದಲ್ಲಿ ಸುರಕ್ಷಿತವಾಗಿ ಇಳಿದಿತ್ತು. ಭವಿಷ್ಯದಲ್ಲಿ ಮಾನವಸಹಿತ ಬಾಹ್ಯಾಕಾಶ ಅಭಿಯಾನಗಳಲ್ಲಿ ಸ್ಯಾಂಪಲ್‌ಗಳ ಸಂಗ್ರಹಕ್ಕೆ ಸುಗಮ ದಾರಿ ಕಲ್ಪಿಸಿರುವ ಈ ಆರಂಭಿಕ ಹೆಜ್ಜೆಯನ್ನು ಯಶಸ್ಸು ಎಂದು ಪರಿಗಣಿಸಲಾಗಿದೆ.

ರೋವರ್ ತನ್ನ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಿದೆ ಎಂದು ಇಸ್ರೋ ಸೆ.2ರಂದು ವರದಿ ಮಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News