ಇಂಡಿಯಾ ಮೈತ್ರಿಕೂಟ ಸೇರುವ ಕುರಿತು ಕಮಲ್ ಹಾಸನ್ ಹೇಳಿದ್ದೇನು?

Update: 2024-02-21 08:05 GMT

ಕಮಲ್ ಹಾಸನ್ (Photo: PTI)

ಚೆನ್ನೈ: ತಮ್ಮ ಎಂಎನ್‌ಎಂ ಪಕ್ಷವು ರಾಜಕೀಯ ಮೈತ್ರಿ ಕೂಟದೊಂದಿಗೆ ಸೇರ್ಪಡೆಯಾಗಲು ಮಾತುಕತೆ ನಡೆಯುತ್ತಿದ್ದು, ದೇಶಕ್ಕಾಗಿ ನಿಸ್ವಾರ್ಥ ಮನೋಭಾವ ಹೊಂದಿರುವ ಯಾವುದೇ ಮೈತ್ರಿಕೂಟವನ್ನಾದರೂ ಸೇರ್ಪಡೆಯಾಗುತ್ತೇನೆ ಎಂದು ಬುಧವಾರ ನಟ, ರಾಜಕಾರಣಿ ಕಮಲ್ ಹಾಸನ್ ಸ್ಪಷ್ಟಪಡಿಸಿದ್ದಾರೆ.

ತಮ್ಮ ಮಕ್ಕಳ್ ನೀತಿ ಮಯಮ್ ಪಕ್ಷದ ಏಳನೆಯ ವಾರ್ಷಿಕೋತ್ಸವದಂದು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಕಮಲ್ ಹಾಸನ್, ಇತ್ತೀಚೆಗೆ ರಾಜಕೀಯ ಪ್ರವೇಶಿಸಿರುವ ತಮಿಳು ನಟ ವಿಜಯ್ ಅವರಿಗೆ ಸ್ವಾಗತ ಕೋರಿದರು.

ಎಂಎನ್‌ಎಂ ಪಕ್ಷವೇನಾದರೂ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದೊಂದಿಗೆ ಸೇರ್ಪಡೆಯಾಗಲಿದೆಯೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕಮಲ್ ಹಾಸನ್, "ನಾನು ಈಗಾಗಲೇ ಹೇಳಿದ್ದೇನೆ, ಇದು ಪಕ್ಷ ರಾಜಕಾರಣವನ್ನು ಮರೆತು ದೇಶದ ಕುರಿತು ಚಿಂತಿಸುವ ಸಮಯ ಎಂದು. ದೇಶದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವ ಯಾರೊಂದಿಗಾದರೂ ನಮ್ಮ ಪಕ್ಷ ಭಾಗಿಯಾಗಲಿದೆ. ಆದರೆ, ಸ್ಥಳೀಯ ಊಳಿಗಮಾನ್ಯ ರಾಜಕೀಯದೊಂದಿಗೆ ಭಾಗಿಯಾಗುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

ಕಮಲ್ ಹಾಸನ್ ನೇತೃತ್ವದ ಎಂಎನ್‌ಎಂ ಪಕ್ಷವು 2019ರ ಲೋಕಸಭಾ ಚುನಾವಣೆ ಹಾಗೂ 2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿತ್ತಾದರೂ, ಪರಿಣಾಮಕಾರಿ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News