ವಿಶ್ವಕಪ್ ಕ್ರಿಕೆಟ್ ಫೈನಲ್: ಅಹಮದಾಬಾದ್ ಗೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದ ರೈಲ್ವೆ ಇಲಾಖೆ
ಅಹಮದಾಬಾದ್: ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯವನ್ನು ವೀಕ್ಷಿಸಲು ಅಹಮದಾಬಾದ್ ನತ್ತ ಧಾವಿಸುತ್ತಿರುವ ಕ್ರಿಕೆಟ್ ಅಭಿಮಾನಿಗಳ ದಟ್ಟಣೆಯನ್ನು ನಿಯಂತ್ರಿಸಲು ರೈಲ್ವೆ ಇಲಾಖೆಯು ವಿಶೇಷ ರೈಲುಗಳ ಸೇವೆಯನ್ನು ಪ್ರಕಟಿಸಿದೆ. ನವೆಂಬರ್ 19(ರವಿವಾರ)ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ ಎಂದು indiatoday.in ವರದಿ ಮಾಡಿದೆ.
ವಿಶೇಷ ರೈಲುಗಳು ದಿಲ್ಲಿ ಹಾಗೂ ಮುಂಬೈನಿಂದ ಅಹಮದಾಬಾದ್‌ಗೆ ಕಾರ್ಯಾಚರಿಸಲಿವೆ. ಈ ರೈಲುಗಳು ಶನಿವಾರ ರಾತ್ರಿ ನಿರ್ಗಮಿಸಲಿದ್ದು, ರವಿವಾರ ಬೆಳಗ್ಗೆ ಅಹಮದಾಬಾದ್ ತಲುಪಲಿವೆ. ಈ ಪೈಕಿ ಒಂದು ರೈಲು ದಿಲ್ಲಿಯಿಂದ ಪ್ರಯಾಣ ಬೆಳೆಸಿದರೆ, ಮೂರು ರೈಲುಗಳು ಮುಂಬೈನಿಂದ ಸಂಚರಿಸಲಿವೆ.
ದುಬಾರಿಯಾಗಿರುವ ವಿಮಾನ ಪ್ರಯಾಣದ ಟಿಕೆಟ್‌ಗಳಿಗೆ ಹೋಲಿಸಿದರೆ ರೈಲು ಪ್ರಯಾಣ ಟಿಕೆಟ್ ದರವು ಅಗ್ಗವಾಗಿರಲಿದೆ ಎಂದು ಭಾರತೀಯ ರೈಲ್ವೆ ಖಾತ್ರಿಪಡಿಸಿದೆ. ಇದಕ್ಕೂ ಮುನ್ನ, ಎಲ್ಲ ಸಾಮಾನ್ಯ ರೈಲುಗಳಲ್ಲಿನ ಮೀಸಲು ಆಸನಗಳು ಭರ್ತಿಯಾಗಿದ್ದವು ಹಾಗೂ ವಿಮಾನ ಪ್ರಯಾಣ ದರವು ರೂ. 20,000ದಿಂದ ರೂ. 40,000ವರೆಗೆ ಏರಿಕೆಯಾಗಿದೆ.
ರೈಲ್ವೆ ಇಲಾಖೆ ಪ್ರಕಟಿಸಿರುವ ವಿಶೇಷ ರೈಲುಗಳಲ್ಲಿ ಪ್ರಯಾಣಿಸಲು ಬಯಸುವ ಪ್ರಯಾಣಿಕರು ಸ್ಲೀಪರ್ ದರ್ಜೆಗೆ ರೂ. 620, 3ಎಸಿ ಸಾಮಾನ್ಯ ಬರ್ತ್ ದರ್ಜೆಗೆ ರೂ. 1,525, ಪ್ರಮಾಣೀಕೃತ 3ಎಸಿ ಆಸನಕ್ಕೆ ರೂ. 1,665 ಹಾಗೂ ಪ್ರಥಮ ದರ್ಜೆಯ ಹವಾನಿಯಂತ್ರಿತ ಆಸನಕ್ಕೆ ರೂ. 3,490 ಪಾವತಿಸಬೇಕಿದೆ.