ಟೀ ಶರ್ಟ್ ಗಳ ಮೇಲೆ ವಿಜೃಂಭಿಸಿದ ಲಾರೆನ್ಸ್ ಬಿಷ್ಣೋಯಿ, ದಾವೂದ್ ಇಬ್ರಾಹಿಂ!
ಮುಂಬೈ: ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಹಾಗೂ ಭೂಗತ ದೊರೆ ದಾವೂದ್ ಇಬ್ರಾಹಿಂ ಅನ್ನು ವೈಭವೀಕರಿಸುವ ಟೀ ಶರ್ಟ್ ಮಾರಾಟ ಮಾಡುತ್ತಿದ್ದ ಆನ್ ಲೈನ್ ಮಾರುಕಟ್ಟೆ ತಾಣಗಳು ಹಾಗೂ ಇ-ಕಾಮರ್ಸ್ ತಾಣಗಳ ಮೇಲೆ ಮುಂಬೈ ಪೊಲೀಸ್ ಇಲಾಖೆಯ ಸೈಬರ್ ಘಟಕವು ಎಫ್ಐಆರ್ ದಾಖಲಿಸಿಕೊಂಡಿದೆ ಎಂದು ಗುರುವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕ್ರಿಮಿನಲ್ ವ್ಯಕ್ತಿಗಳನ್ನು ವೈಭವೀಕರಿಸುವ ಉತ್ಪನ್ನಗಳಿಂದ ಸಮಾಜದ ಮೇಲೆ ಗಮನಾರ್ಹ ಅಪಾಯ ಉಂಟಾಗಲಿದೆ. ಇದರಿಂದ ಯುವ ಮನಸ್ಸುಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಬರ್ ಭದ್ರತೆಯ ಅಧಿಕಾರಿಗಳು ಆನ್ ಲೈನ್ ತಪಾಸಣೆ ನಡೆಸಿದ ಸಂದರ್ಭದಲ್ಲಿ ಫ್ಲಿಪ್ ಕಾರ್ಟ್, ಅಲಿ ಎಕ್ಸ್ ಪ್ರೆಸ್ ನಂತಹ ಹಲವು ಇ-ಕಾಮರ್ಸ್ ತಾಣಗಳು ಹಾಗೂ ಆನ್ ಲೈನ್ ಮಾರುಕಟ್ಟೆ ತಾಣಗಳಾದ ಟೀಶಾಪರ್ ಹಾಗೂ ಎಸ್ಟಿಯಂತಹ ಸಂಸ್ಥೆಗಳು ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಹಾಗೂ ಭೂಗತ ದೊರೆ ದಾವೂದ್ ಇಬ್ರಾಹಿಂ ಅನ್ನು ವೈಭವೀಕರಿಸುವ ಟೀ ಶರ್ಟ್ ಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಮಹಾರಾಷ್ಟ್ರ ಸೈಬರ್ ವಿಭಾಗವು, ನಾವು ಈ ಉತ್ಪನ್ನಗಳನ್ನು ಅಪಾಯಕಾರಿ ಎಂದು ಪರಿಗಣಿಸಿದ್ದು, ಅಪರಾಧ ಜೀವನ ಶೈಲಿಯನ್ನು ವೈಭವೀಕರಿಸುವ ಸಂದೇಶಗಳನ್ನು ಹರಡುವ ಸಾಮಾನ್ಯ ಉಡುಪುಗಳನ್ನು ಪ್ರಚಾರ ಮಾಡುವ ಮೂಲಕ ಯುವಜನರ ಮೌಲ್ಯಗಳನ್ನು ಭ್ರಷ್ಟಗೊಳಿಸುವ ಪ್ರಯತ್ನಗಳನ್ನು ಈ ಉತ್ಪನ್ನಗಳು ನಡೆಸುತ್ತಿವೆ ಎಂದು ಹೇಳಿದೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಸೈಬರ್ ವಿಭಾಗವು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 192, 196 ಹಾಗೂ 353 ಸೇರಿದಂತೆ ವಿವಿಧ ಸೆಕ್ಷನ್ ಗಳು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಈ ಆಕ್ಷೇಪಾರ್ಹ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.