ಲೋಕಸಭಾ ಚುನಾವಣೆ: ಬಿಜೆಪಿಯ ಐದನೇ ಪಟ್ಟಿ ಇಂದು ಬಿಡುಗಡೆ ನಿರೀಕ್ಷೆ
ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಪಕ್ಷ ಭಾನುವಾರ ಬಿಡುಗಡೆ ಮಾಡುವ ನಿರೀಕೆ ಇದೆ. ಪಕ್ಷದ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ಬಿಜೆಪಿಯ ಕೇಂದ್ರೀಯ ಚುನಾವಣಾ ಸಮಿತಿಯ ಮೂರನೇ ಸಭೆಯಲ್ಲಿ ಈ ಪಟ್ಟಿಯನ್ನು ಅಂತಿಮಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಸಂಭಾವ್ಯ ಅಭ್ಯರ್ಥಿಗಳು ಮತ್ತು ಹಾಲಿ ಸಂಸದರು ಮತ್ತು ಕೇಂದ್ರ ಸಚಿವರನ್ನು ಮತ್ತೆ ಕಣಕ್ಕಿಳಿಸುವ ಸಂಬಂಧ ರಾಜ್ಯ ಘಟಕಗಳಿಂದ ಬಂದ ಅಭಿಪ್ರಾಯಗಳ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಭೂತಾನ್ ಪ್ರವಾಸದಿಂದ ವಾಪಸ್ಸಾದ ಬಳಿಕ ಈ ಸಭೆಯನ್ನು ಆಯೋಜಿಸಲಾಗಿತ್ತು. ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಹಾಗೂ ಜೆ.ಪಿ.ನಡ್ಡಾ ಅವರ ಆಪ್ತರು ಸಮಿತಿಯಲ್ಲಿದ್ದಾರೆ. ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಅಭ್ಯರ್ಥಿಯ ಸೂಕ್ತತೆ, ಸಾರ್ವಜನಿಕ ಸಂಪರ್ಕ ಮತ್ತು ರಾಜಕೀಯ ನಿಲುವಿನ ಆಧಾದಲ್ಲಿ ಗೆಲುವಿನ ಸಾಧ್ಯತೆ ಈ ಎರಡು ಅಂಶಗಳನ್ನು ಪ್ರಮುಖ ಮಾನದಂಡವಾಗಿ ಇರಿಸಿಕೊಳ್ಳಲಾಗಿದೆ. ಪಕ್ಷ 370 ಸ್ಥಾನಗಳನ್ನು ಗೆಲ್ಲುವ ಗುರಿ ಸಾಧಿಸುವ ನಿಟ್ಟಿನಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಈಗಾಗಲೇ ಮೊದಲ ಹಂತದ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆ ಕಾರ್ಯ ಆರಂಭವಾಗಿರುವುದರಿಂದ ಭಾನುವಾರ ಐದನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. ಉತ್ತರ ಪ್ರದೇಶ, ಹರ್ಯಾಣ, ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರದ ಅಭ್ಯರ್ಥಿಗಳ ಬಗ್ಗೆ ಶನಿವಾರದ ಸಭೆಯಲ್ಲಿ ಚರ್ಚೆ ನಡೆಯಿತು.
ಹಲವು ಮಂದಿ ಹಾಲಿ ಸಂಸದರ ಬಗ್ಗೆ ಪ್ರಧಾನಿಯವರ ಎದುರು ಸಿಇಸಿ ಸದಸ್ಯರು ಅಭಿಪ್ರಾಯ ಹಂಚಿಕೊಂಡರು. ವರುಣ್ ಗಾಂಧಿ (ಫಿಲಿಬಿಟ್), ಮೇನಕಾ ಗಾಂಧಿ, ವಿ.ಕೆ.ಸಿಂಗ್, ಬ್ರಿಜ್ ಭೂಷಣ್ ಸಿಂಗ್ ಮತ್ತು ಇತರ ಕೆಲ ಕೇಂದ್ರ ಸಚಿವರ ಉಮೇದುವಾರಿಕೆ ಬಗ್ಗೆ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.