ಮಹಾರಾಷ್ಟ್ರ | ಬಿಸ್ಕೆಟ್ ಫ್ಯಾಕ್ಟರಿ ಯಂತ್ರದ ಬೆಲ್ಟ್‌ಗೆ ಸಿಲುಕಿ ಬಾಲಕ ಮೃತ್ಯು
ಥಾಣೆ : ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿರುವ ಬಿಸ್ಕೆಟ್ ಕಾರ್ಖಾನೆಯ ಯಂತ್ರದ ಬೆಲ್ಟ್‌ಗೆ ಸಿಲುಕಿ 3 ವರ್ಷದ ಬಾಲಕನೋರ್ವ ಮೃತಪಟ್ಟಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಈ ಘಟನೆ ಅಂಬರನಾಥ್‌ನಲ್ಲಿ ಸೋಮವಾರ ಸಂಭವಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
‘‘ಬಾಲಕ ಆಯುಷ್ ಚೌಹಾಣ್ ತನ್ನ ತಾಯಿಯೊಂದಿಗೆ ಬಿಸ್ಕಿಟ್ ಕಾರ್ಖಾನೆಗೆ ಬಂದಿದ್ದ. ಈ ಸಂದರ್ಭ ಬಾಲಕ ಯಂತ್ರದ ಬೆಲ್ಟ್‌ನಿಂದ ಬಿಸ್ಕೆಟ್ ಅನ್ನು ಹೆಕ್ಕಲು ಪ್ರಯತ್ನಿಸಿದ್ದಾನೆ. ಆದರೆ, ಆತ ಬೆಲ್ಟಿಗೆ ಸಿಲುಕಿಕೊಂಡಿದ್ದಾನೆ. ಕಾರ್ಖಾನೆಯ ಸಿಬ್ಬಂದಿ ಬಾಲಕನನ್ನು ಬೆಲ್ಟ್‌ನಿಂದ ಹೊರಗೆಳೆದರು ಹಾಗೂ ಕೂಡಲೇ ಸಮೀಪದ ಆಸ್ಪತ್ರೆಗೆ ಕೊಂಡೊಯ್ದರು. ಆದರೆ, ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು’’ ಎಂದು ಅಂಬರನಾಥ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಅನಂತರ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು ಹಾಗೂ ಆಕಸ್ಮಿಕ ಸಾವು ಪ್ರಕರಣ ದಾಖಲಿಸಲಾಯಿತು ಎಂದು ಅವರು ತಿಳಿಸಿದ್ದಾರೆ.