ಮಣಿಪುರ ಜನಾಂಗೀಯ ಹಿಂಸಾಚಾರದಲ್ಲಿ 219 ಮಂದಿ ಮೃತ್ಯು, 10,000 ಎಫ್‌ಐಆರ್‌ ದಾಖಲು: ರಾಜ್ಯಪಾಲೆ

Update: 2024-02-29 11:37 GMT

ರಾಜ್ಯಪಾಲೆ ಅನುಸೂಯಾ ಉಯಿಕೆ (X/@RajBhavManipur)

ಗುವಾಹಟಿ: ಮೇ 3 ರಿಂದ ಮಣಿಪುರದಲ್ಲಿ ಉಂಟಾಗಿರುವ ಮೈತೈ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ ಇದುವರೆಗೂ 219 ಜನರು ಸಾವನ್ನಪ್ಪಿದ್ದು, ಸುಮಾರು 60,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಾಜ್ಯಪಾಲೆ ಅನುಸೂಯಾ ಉಯಿಕೆ ಬುಧವಾರ ಹೇಳಿದ್ದಾರೆ.

ಶಾಸನ ಸಭೆಯನ್ನುದ್ದೇಶಿಸಿ ಮಾಡಿದ ಭಾಷಣದ ಭಾಗವಾಗಿ ಮಾಹಿತಿಯನ್ನು ಹಂಚಿಕೊಂಡ ಅವರು, “ಹಿಂಸಾಚಾರ ಪ್ರಾರಂಭವಾದಾಗಿನಿಂದ, ಪೊಲೀಸರು 1.87 ಲಕ್ಷ ಜನರನ್ನು ವಶಕ್ಕೆ ಪಡೆದು ಕಾನೂನು ವಿಧಿವಿಧಾನಗಳ ನಂತರ ಬಿಡುಗಡೆ ಮಾಡಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಮಾರು 10,000 ಎಫ್‌ಐಆರ್‌ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ.

ಈ ಪೈಕಿ 29 ಪ್ರಕರಣಗಳನ್ನು ಕೇಂದ್ರೀಯ ತನಿಖಾ ದಳ ತನಿಖೆ ನಡೆಸುತ್ತಿದೆ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ಒಂದು ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಇನ್ನೂ ನಾಲ್ಕು ಪ್ರಕರಣಗಳನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ಗೆ ಮತ್ತು ಐದು ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಲಾಗುವುದು ಎಂದು ಅವರು ಹೇಳಿದರು.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರಾಜ್ಯದಲ್ಲಿ 198 ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು 140 ಸೇನಾ ಕಾಲಂಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

"ದುಷ್ಕರ್ಮಿಗಳು ಕಸಿದುಕೊಂಡ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಲೆಕ್ಕಪರಿಶೋಧನೆ ಮತ್ತು ಅದನ್ನು ಮರುಪಡೆಯಲು ಸಮಿತಿಯನ್ನು ಸಹ ರಚಿಸಲಾಗಿದೆ. ಕಳಕೊಂಡ ಶಸ್ತ್ರಾಸ್ತ್ರಗಳ ಮರುಪಡೆಯುವಿಕೆಗಾಗಿ ಗುಪ್ತಚರ ಆಧಾರಿತ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ." ಎಂದು ಅವರು ತಿಳಿಸಿದ್ದಾರೆ.

ಹಿಂಸಾಚಾರದಿಂದ ರಾಜ್ಯದ ಆರ್ಥಿಕ ಸ್ಥಿತಿಗೆ ಧಕ್ಕೆಯಾಗಿದೆ ಎಂದು ಹೇಳಿದ ಅವರು, "2023-24 ರ ಆರ್ಥಿಕ ವರ್ಷವು ರಾಜ್ಯಕ್ಕೆ ಕಠಿಣ ವರ್ಷವಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಅಶಾಂತಿಯು ರಾಜ್ಯದ ಆರ್ಥಿಕತೆಯ ಮೇಲೆ ಭಾರಿ ನಷ್ಟವನ್ನುಂಟು ಮಾಡಿದೆ. ಇದುವರೆಗಿನ ಸ್ವಂತ ತೆರಿಗೆ ಮತ್ತು ತೆರಿಗೆಯೇತರ ಸಂಗ್ರಹದ ಪ್ರವೃತ್ತಿಯನ್ನು ಗಮನಿಸಿದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯವು 800 ಕೋಟಿ ರೂಪಾಯಿಗಳ ಹಣಕಾಸಿನ ಸಂಪನ್ಮೂಲಗಳನ್ನು ಕಳೆದುಕೊಳ್ಳಬಹುದು” ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News