ಮಣಿಪುರ | ಶಸ್ತ್ರಾಸ್ತ್ರ ಲೂಟಿ ಪ್ರಕರಣ : ಸಿಬಿಐಯಿಂದ 7 ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ
ಗುವಾಹಟಿ: ಮಣಿಪುರದಲ್ಲಿ ಕಳೆದ ವರ್ಷ ಜನಾಂಗೀಯ ಹಿಂಸಾಚಾರ ನಡೆದ ಸಂದರ್ಭ ಬಿಷ್ಣುಪುರ ಪೊಲೀಸ್ ಶಸ್ತ್ರಾಗಾರದಿಂದ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳನ್ನು ಲೂಟಿಗೈದ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ 7 ಮಂದಿಯ ವಿರುದ್ಧ ಸಿಬಿಐ ಆರೋಪ ಪಟ್ಟಿ ಸಲ್ಲಿಸಿದೆ.
ಅಸ್ಸಾಂನ ಗುವಾಹಟಿಯ ಕಾಮರೂಪ್ (ಮೆಟ್ರೊ)ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಸಿಬಿಐ ಈ ಆರೋಪ ಪಟ್ಟಿಯನ್ನು ಸಲ್ಲಿಸಿದೆ.
ಲೈಶರಾಮ್ ಪ್ರೇಮ್ ಸಿಂಗ್, ಖುಮುಕಚಾಮ್ ಧೀರೇನ್ ಆಲಿಯಾಸ್ ತಪ್ಕಾ, ಮೊಯಿರಂಗ್ತೆಮ್ ಆನಂದ್ ಸಿಂಗ್, ಅತೋಕ್ಪಮ್ ಕಜಿತ್ ಆಲಿಯಾಸ್ ಕಿಶೋರ್ಜಿತ್, ಲೌಕ್ರಕ್ಪಮ್ ಮೈಕಲ್ ಮಂಗಾಂಗ್ಚ ಆಲಿಯಾಸ್ ಮೈಕಲ್, ಕೊಂತೌಜಮ್ ರೋಮೊಜಿತ್ ಮೈತೈ ಆಲಿಯಾಸ್ ರೋಮೋಜಿತ್ ಹಾಗೂ ಕೈಶಾಮ್ ಜಾನ್ಸಲ್ ಆಲಿಯಾಸ್ ಜಾನ್ಸನ್ನನ್ನು ಆರೋಪಿಗಳು ಎಂದು ಆರೋಪ ಪಟ್ಟಿಯಲ್ಲಿ ಗುರುತಿಸಲಾಗಿದೆ.
ಈ ಘಟನೆ ಕಳೆದ ವರ್ಷ ಆಗಸ್ಟ್ ನಲ್ಲಿ ಸಂಭವಿಸಿತ್ತು. ಬಿಷ್ಣುಪುರದ ನರನ್ಸೈನಾದಲ್ಲಿರುವ 2ನೇ ಇಂಡಿಯನ್ ರಿಸರ್ವ್ ಬೆಟಾಲಿಯನ್ನಿನ ಕೇಂದ್ರದಿಂದ 300ಕ್ಕೂ ಅಧಿಕ ಶಸ್ತ್ರಾಸ್ತ್ರಗಳು ಹಾಗೂ 19,800 ಸುತ್ತು ಮದ್ದು ಗುಂಡುಗಳನ್ನು ಗುಂಪೊಂದು ಲೂಟಿಗೈದಿತ್ತು.
ಲೂಟಿಗೈದ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳಲ್ಲಿ ವಿವಿದ ಸಾಮರ್ಥ್ಯದ ಗುಂಡುಗಳು, ಎ.ಕೆ. ಸರಣಿಯ ಅಸಾಲ್ಟ್ ರೈಫಲ್, ‘ಘಾತಕ್’ ರೈಫಲ್, ಸೆಲ್ಫ್ ಲೋಡಿಂಗ್ ರೈಫಲ್, ಎಂಪಿ-5 ಗನ್, ಪಿಸ್ಟೂಲ್, ಗುಂಡು ನಿರೋಧಕ ಜಾಕೆಟ್, ಕಾರ್ಬೈನ್ ಹಾಗೂ ಕೈಬಾಂಬ್ ಗಳು ಸೇರಿದ್ದವು.