ದೇವಸ್ಥಾನದಲ್ಲಿ ಅಣಕು ಕಾರ್ಯಾಚರಣೆ: ‘ಉಗ್ರನ ವೇಷ’ ಧರಿಸಿದ್ದ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ

Update: 2023-08-09 18:27 GMT

ನಾಸಿಕ್: ಮಹಾರಾಷ್ಟ್ರದ ಧುಲೆ ನಗರದಲ್ಲಿ ಪೊಲೀಸ್ ಇಲಾಖೆಯು ಆಯೋಜಿಸಿದ್ದ ಅಣಕು ಕಾರ್ಯಾಚರಣೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ‘ಉಗ್ರನ ವೇಷ’ ಧರಿಸಿದ್ದ ಪೊಲೀಸ್ ಅಧಿಕಾರಿಯ ಕೆನ್ನೆಗೆ ಬಾರಿಸಿರುವ ಘಟನೆ ನಡೆದಿದೆ ಎಂದು Times Of India ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆದರೆ, ಅದು ಅಣಕು ಕಾರ್ಯಾಚರಣೆ ಎಂಬ ಸಂಗತಿ ತಿಳಿಯದೆ ಆ ವ್ಯಕ್ತಿ ಅಂತಹ ಕೃತ್ಯ ನಡೆಸಿದ್ದರಿಂದಾಗಿ ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟು ಕಳಿಸಲಾಗಿದೆ. ಈ ಘಟನೆಯು ಸೋಮವಾರ ಸಂಜೆ ನಡೆದಿದೆ.

ತನ್ನ ಮಕ್ಕಳು ‘ಉಗ್ರರ ವೇಷ’ ಧರಿಸಿರುವವರನ್ನು ಕಂಡು ಅಳತೊಡಗಿದ್ದನ್ನು ಕಂಡು ಆ ವ್ಯಕ್ತಿಯು ಕುಪಿತಗೊಂಡಿದ್ದಾನೆ ಎಂದು ಹೇಳಲಾಗಿದೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಸ್ಥಳೀಯ ಅಪರಾಧ ವಿಭಾಗದ ಪೊಲೀಸ್ ಇನ್ಸ್ ಪೆಕ್ಟರ್ ಹೇಮಂತ್ ಪಾಟೀಲ್, ಧುಲೆ ನಗರದ ದೇವಾಲಯವೊಂದರಲ್ಲಿ ಉಗ್ರಗಾಮಿ ನಿಗ್ರಹ ಪ್ರತಿಸ್ಪಂದನಾ ಅಣಕು ಕಾರ್ಯಾಚರಣೆಯಲ್ಲಿ ಸುಮಾರು 80-90ಕ್ಕಿಂತ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.

ಅಣಕು ಕಾರ್ಯಾಚರಣೆಯ ಸಂದರ್ಭದಲ್ಲಿ ಸದ್ಯ ತನ್ನ ವರ್ತನೆಯಿಂದ ಪ್ರಶ್ನೆಗೊಳಗಾಗಿರುವ ವ್ಯಕ್ತಿಯೂ ತನ್ನ ಕುಟುಂಬದ ಸದಸ್ಯರೊಂದಿಗೆ ದೇವಾಲಯದಲ್ಲಿ ಉಪಸ್ಥಿತನಿದ್ದ ಎಂದು ವರದಿಯಾಗಿದೆ.

ಅಣಕು ಕಾರ್ಯಾಚರಣೆಯ ಸಂದರ್ಭದಲ್ಲಿ ಉಗ್ರಗಾಮಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಪೊಲೀಸರು ಪ್ರಾರಂಭಿಸುತ್ತಿದ್ದಂತೆಯೆ, ಪೊಲೀಸರನ್ನು ಎದುರುಗೊಂಡಿರುವ ಆ ವ್ಯಕ್ತಿಯು, ಉಗ್ರನ ವೇಷ ಧರಿಸಿದ್ದ ಪೊಲೀಸ್ ಅಧಿಕಾರಿಯ ಕೆನ್ನೆಗೆ ಬಾರಿಸಿ, “ಸಣ್ಣ ಮಕ್ಕಳು ಹೆದರಿಕೊಂಡಿದ್ದಾರೆ ಮತ್ತು ಅಳಲು ಪ್ರಾರಂಭಿಸಿದ್ದಾರೆ ಎಂಬುದು ನಿನಗೆ ಅರ್ಥವಾಗುತ್ತಿಲ್ಲವೆ?” ಎಂದು ಪ್ರಶ್ನಿಸಿದ್ದಾನೆ.

ಕೂಡಲೇ ಆ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಪೊಲೀಸ್ ಅಧಿಕಾರಿಗಳು, ಅದು ಪೊಲೀಸರ ಅಣಕು ಕಾರ್ಯಾಚರಣೆ ಎಂಬ ಸಂಗತಿಯನ್ನು ಆ ವ್ಯಕ್ತಿಗೆ ವಿವರಿಸಿದ್ದಾರೆ.

“ನಂತರ ಆ ವ್ಯಕ್ತಿ ಪೊಲೀಸರ ಕ್ಷಮೆ ಯಾಚಿಸಿದ ಮತ್ತು ಆ ವ್ಯಕ್ತಿಯ ವಿರುದ್ಧ ಯಾವುದೇ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವುದಿಲ್ಲ” ಎಂದು ಪೊಲೀಸ್ ಇನ್ಸ್ ಪೆಕ್ಟರ್ ಹೇಮಂತ್ ಪಾಟೀಲ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News