ಹೆಸರು ಬದಲಾಯಿಸಿದ ಜೋಸ್ ಬಟ್ಲರ್

Update: 2024-04-01 17:16 GMT

ಜೋಶ್ ಬಟ್ಲರ್ | Photo: X \ @englandcricket

ಹೊಸದಿಲ್ಲಿ: ಇಂಗ್ಲೆಂಡ್ ಕ್ರಿಕೆಟ್‌ ನ ಬಿಳಿ ಚೆಂಡು (ಏಕದಿನ ಮತ್ತು ಟ್ವೆಂಟಿ20 ತಂಡಗಳ) ನಾಯಕ ಜೋಸ್ ಬಟ್ಲರ್ (Jos Buttler) ತನ್ನ ಹೆಸರನ್ನು ಅಧಿಕೃತವಾಗಿ ಜೋಶ್ ಬಟ್ಲರ್ (Josh Buttler) ಎಂಬುದಾಗಿ ಬದಲಾಯಿಸಿದ್ದಾರೆ.

ಜನರು ತನ್ನ ಹೆಸರನ್ನು ತಪ್ಪಾಗಿ ಹೇಳುವುದನ್ನು ವರ್ಷಗಟ್ಟಳೆ ಕೇಳಿದ ಬಳಿಕ, ‘‘ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವುದಕ್ಕಾಗಿ’’ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ)ಯು ಈ ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ. ತನ್ನ ಹೆಸರು ಬದಲಾವಣೆಯನ್ನು ಸ್ವತಃ ಬಟ್ಲರ್ ಘೋಷಿಸುವ ವೀಡಿಯೊವೊಂದನ್ನು ಅದು ಬಿಡುಗಡೆಗೊಳಿಸಿದೆ.

‘‘ಜನರು ನನ್ನ ಹೆಸರನ್ನು ‘ಜೋಸ್’ ಬದಲಿಗೆ ‘ಜೋಶ್’ ಎಂಬುದಾಗಿ ತಪ್ಪಾಗಿ ಹೇಳುತ್ತಿದ್ದರು. 30 ವರ್ಷಗಳ ಕಾಲ ಅವರನ್ನು ತಿದ್ದಿ ತಿದ್ದಿ ಸಾಕಾಯಿತು. ಇನ್ನು ತಿದ್ದುವ ಕೆಲಸ ಬೇಡವೆಂದು ನಿರ್ಧರಿಸಿ ತನ್ನ ಹೆಸರನ್ನು ನಾನೇ ಅಧಿಕೃತವಾಗಿ ‘ಜೋಶ್’ ಎಂಬುದಾಗಿ ಬದಲಿಸುತ್ತಿದ್ದೇನೆ. ಇನ್ನು ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲ’’ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.

‘‘ನಾನು ಇಂಗ್ಲೆಂಡ್ ಕ್ರಿಕೆಟ್‌ ನ ಬಿಳಿ ಚೆಂಡಿನ ನಾಹಕ ಜೋಸ್ ಬಟ್ಲರ್. ಆದರೆ ನನ್ನ ಇಡೀ ಬದುಕಿನಲ್ಲಿ ಜನರು ನನ್ನ ಹೆಸರನ್ನು ತಪ್ಪಾಗಿ ಕರೆದಿದ್ದಾರೆ. ರಸ್ತೆಯಲ್ಲಿ ಹೋಗುವ ಜನರಿಂದ ಹಿಡಿದು, ನನ್ನ ಅಮ್ಮನವರೆಗೆ ಎಲ್ಲರೂ ಜೋಶ್ ಬಟ್ಲರ್ ಎಂಬುದಾಗಿ ಕರೆಯುತ್ತಿದ್ದಾರೆ. ‘ಪ್ರೀತಿಯ ಜೋಶ್, ನೀನು ದೊಡ್ಡವನಾಗುತ್ತಿರುವೆ. ಹುಟ್ಟುಹಬ್ಬದ ಶುಭಾಶಯಗಳು. ಪ್ರೀತಿಯಿಂದ, ಅಮ್ಮ. ಹಾಗಾಗಿ, ನನ್ನ ದೇಶವನ್ನು 13 ವರ್ಷ ಪ್ರತಿನಿಧಿಸಿದ ಬಳಿಕ ಮತ್ತು ಎರಡು ವಿಶ್ವಕಪ್ ಗಳನ್ನು ಗೆದ್ದ ಬಳಿಕ, ಕೊನೆಗೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಮಯ ಬಂದಿದೆ. ನಾನೀಗ ಅಧಿಕೃತವಾಗಿ ‘ಜೋಶ್ ಬಟ್ಲರ್’ ’’ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News