ಭಾರತದಲ್ಲಿ ಹೆಚ್ಚಿದ ಆನ್ ಲೈನ್ ಖರೀದಿ | ಒಂದೇ ವರ್ಷದಲ್ಲಿ‌ ಮುಚ್ಚಲ್ಪಟ್ಟ 2 ಲಕ್ಷ ಕಿರಾಣಿ ಅಂಗಡಿಗಳು!

Update: 2024-10-30 06:00 GMT

Photo : facebook.com

ಹೊಸದಿಲ್ಲಿ : ಭಾರತದಲ್ಲಿ ಆನ್ ಲೈನ್ ವ್ಯಾಪಾರದ ಅಬ್ಬರ ಜೋರಾಗಿದ್ದು, ತಲೆಮಾರುಗಳಿಂದ ವಸ್ತುಗಳ ಖರೀದಿಗೆ ಮೂಲವಾಗಿದ್ದ ಚಿಲ್ಲರೆ ಅಂಗಡಿಗಳ ವ್ಯಾಪಾರಕ್ಕೆ ಧಕ್ಕೆ ಉಂಟಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

Blinkit, Zepto, Swiggy, Instamart ಗಳಂತಹ ವಾಣಿಜ್ಯ ವೇದಿಕೆಗಳ ತ್ವರಿತ ಬೆಳವಣಿಗೆಯಿಂದ ಸಣ್ಣ ಅಂಗಡಿಗಳು ಅಥವಾ ಕಿರಾಣಿ ಅಂಗಡಿಗಳು ಗಮನಾರ್ಹ ಪರಿಣಾಮವನ್ನು ಎದುರಿಸುತ್ತಿವೆ. ಕಳೆದ ಒಂದು ವರ್ಷದಲ್ಲಿ ದೇಶದಾದ್ಯಂತ 2 ಲಕ್ಷ ಕಿರಾಣಿ ಅಂಗಡಿಗಳು ಬಂದ್ ಆಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಅಖಿಲ ಭಾರತ ಗ್ರಾಹಕ ವಸ್ತುಗಳ ಪೂರೈಕೆ ಸಂಘಟನೆ(ಎಐಸಿಪಿಡಿಎಫ್) ಅಧ್ಯಯನದ ಪ್ರಕಾರ, ಗ್ರಾಹಕರು ಸಾಂಪ್ರದಾಯಿಕ ಖರೀದಿ ವೇದಿಕೆಗಳಿಗಿಂತ ವೇಗದ ವಿತರಣಾ ವೇದಿಕೆಗಳನ್ನು ಹೆಚ್ಚು ಆಯ್ಕೆ ಮಾಡುವುದರಿಂದ ಕಳೆದ ವರ್ಷ ಎರಡು ಲಕ್ಷಕ್ಕೂ ಹೆಚ್ಚು ಕಿರಾಣಿ ಮಳಿಗೆಗಳು ಮುಚ್ಚಲ್ಪಟ್ಟಿವೆ ಎಂದು ತಿಳಿಸಿದೆ.

ಭಾರತದಲ್ಲಿ ಸುಮಾರು 1.30 ಕೋಟಿ ಕಿರಾಣಿ ಮಳಿಗೆಗಳಿವೆ ಎಂದು ಅಂದಾಜಿಸಲಾಗಿದ್ದು, ಅವುಗಳಲ್ಲಿ 1 ಕೋಟಿಗೂ ಅಧಿಕ ಎರಡನೇ ಹಂತದ ನಗರಗಳಲ್ಲಿ ಮತ್ತು ಸಣ್ಣ ನಗರಗಳಲ್ಲಿವೆ.

AICPDF ಅಧ್ಯಯನವು ಕಿರಾಣಿ ಅಂಗಡಿಗಳು ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂದರೆ 45% ದಷ್ಟು ಮುಚ್ಚಲ್ಪಟ್ಟಿದೆ ಎಂದು ವರದಿಯು ತಿಳಿಸಿದೆ. ಒಂದನೇ ಹಂತದ ನಗರಗಳಲ್ಲಿ ಶೇ. 30ರಷ್ಟು ಮತ್ತು 2ನೇ ಮತ್ತು 3ನೇ ಹಂತದ ನಗರಗಳಲ್ಲಿ ಶೇ 25ರಷ್ಟು ಕಿರಾಣಿ ಅಂಗಡಿಗಳು ಮುಚ್ಚಲ್ಪಟ್ಟಿದೆ ಎಂದು ತಿಳಿಸಿದೆ.

ಆನ್‌ ಲೈನ್‌ ಶಾಪಿಂಗ್‌ ಭರಾಟೆ ಕಳೆದ 8 ತಿಂಗಳಲ್ಲಿ ಮತ್ತಷ್ಟು ಹೆಚ್ಚಾಗಿದೆ. ಇ-ಕಾಮರ್ಸ್ ಪರಿಣಾಮವು ಪ್ರಾಥಮಿಕವಾಗಿ ಮೆಟ್ರೋ ನಗರಗಳು ಮತ್ತು ಕೆಲವು ಒಂದನೇ ಹಂತದ ನಗರಗಳಲ್ಲಿ ಕಂಡು ಬರುತ್ತಿದೆ ಎಂದು ಎಐಸಿಪಿಡಿಎಫ್‌ನ ರಾಷ್ಟ್ರೀಯ ಅಧ್ಯಕ್ಷ ಧೈರ್ಯಶೀಲ್ ಪಾಟೀಲ್ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜನರ ಆದ್ಯತೆ ಬದಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆನ್ ಲೈನ್ ಪ್ಲಾಟ್ ಫಾರ್ಮ್ ಗಳಲ್ಲಿ ಬ್ರ್ಯಾಂಡ್ ವಸ್ತುಗಳ ಮಾರಾಟ ಶೇ. 250ರಷ್ಟು ಏರಿಕೆಯಾಗಿದೆ. ಮಹಾನಗರಗಳಲ್ಲೇ ಹೆಚ್ಚು ಇ –ಕಾಮರ್ಸ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.

ಸೌಜನ್ಯ : outlookbusiness.com

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News