ಸಂಸತ್ತಿನ ಆವರಣದಲ್ಲಿರುವ ಗಾಂಧಿ, ಅಂಬೇಡ್ಕರ್, ಶಿವಾಜಿ ಪುತ್ಥಳಿ ಸ್ಥಳಾಂತರ; ಕಾಂಗ್ರೆಸ್ ಆಕ್ಷೇಪ

Update: 2024-06-07 03:04 GMT

PC: X/Jairam_Ramesh

ಹೊಸದಿಲ್ಲಿ: 18ನೇ ಲೋಕಸಭೆಯ ಹೊಸ ಸದಸ್ಯರು ಪ್ರಮಾಣವಚನ ಸ್ವೀಕರಿಸುವ ವೇಳೆ ವಿಭಿನ್ನ ನೋಟದ ಸಂಸತ್ ಸಂಕೀರ್ಣಕ್ಕೆ ಸಾಕ್ಷಿಗಳಾಗಲಿದ್ದಾರೆ. ಆವರಣದಲ್ಲಿರುವ ಮಹಾತ್ಮಗಾಂಧಿ, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಛತ್ರಪತಿ ಶಿವಾಜಿ ಪುತ್ಥಳಿಗಳು ಅವುಗಳ ನಿಯೋಜಿತ ಸ್ಥಳಗಳಲ್ಲಿ ಇರುವುದಿಲ್ಲ ಮಾತ್ರವಲ್ಲದೇ ಸಂಸತ್ತಿನ ಭದ್ರತಾ ಸಿಬ್ಬಂದಿಯ ಬದಲು ಅಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬದಲಾವಣೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೆ, ಎರಡನೇ ಬದಲಾವಣೆ ಭದ್ರತೆ ಕುರಿತ ಕಳವಳಕ್ಕೆ ಕಾರಣವಾಗಿದೆ.

ಈ ಸ್ಥಳಾಂತರಿತ ಪುತ್ಥಳಿಗಳು ಸಂಸತ್ ಸಂಕೀರ್ಣದ ಹಿಂಭಾಗದ ಪ್ರೇರಣ ಸ್ಥಳದಲ್ಲಿ ಸ್ಥಾಪನೆಯಾಗಲಿವೆ ಎಂದು ಲೋಕಸಭಾ ಸೆಕ್ರೆಟ್ರಿಯೇಟ್ ಪ್ರಕಟಣೆ ಹೇಳಿದೆ.

"ಸಂಸತ್ ಸಂಕೀರ್ಣದಲ್ಲಿ ಶ್ರೇಷ್ಠ ನಾಯಕರ ಮತ್ತು ಸ್ವಾತಂತ್ರ ಯೋಧರ ಪುತ್ಥಳಿಗಳನ್ನು ಬೇರೆ ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಸಂಕೀರ್ಣದ ಬೇರೆ ಸ್ಥಳಗಳಲ್ಲಿ ಇವುಗಳನ್ನು ಪ್ರತಿಷ್ಠಾಪನೆ ಮಾಡಿರುವ ಕಾರಣದಿಂದ, ಭೇಟಿ ನೀಡಿದವರು ಇದನ್ನು ಸುಲಭವಾಗಿ ನೋಡಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಈ ಎಲ್ಲ ಪುತ್ಥಳಿಗಳನ್ನು ಗೌರವಯುತವಾಗಿ ಭವ್ಯ ಪ್ರೇರಣಾ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ" ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಈ ಕ್ರಮವನ್ನು ಅಮೇಥಿಯ ನೂತನ ಸಂಸದ ಕೆ.ಎಲ್.ಶರ್ಮಾ ತೀವ್ರವಾಗಿ ವಿರೋಧಿಸಿದ್ದಾರೆ. ಇದು ತೀರಾ ಕ್ಷುಲ್ಲಕ ಕ್ರಮ ಎಂದು ಅವರು ಎಕ್ಸ್ ಪೋಸ್ಟ್ ನಲ್ಲಿ ಆಕ್ಷೇಪಿಸಿದ್ದಾರೆ.

ಹಲವು ವರ್ಷಗಳಿಂದ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ಇದ್ದ 16 ಅಡಿ ಎತ್ತರದ ಕಂಚಿನ ಪ್ರತಿಮೆ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೂಡಾ ಇದನ್ನು ವಿರೋಧಿಸಿ "ಈ ಪ್ರತಿಮೆಗಳನ್ನು ಪ್ರಧಾನ ಸ್ಥಳವಾದ ಮುಂಭಾಗದಿಂದ ಸ್ಥಳಾಂತರಿಸಿರುವ ಕ್ರಮ ದುಷ್ಟ ಕ್ರಮ" ಎಂದು ಎಕ್ಸ್ ಪೋಸ್ಟ್ ನಲ್ಲಿ ಟೀಕಿಸಿದ್ದಾರೆ. ಹಿರಿಯ ಕಾಂಗ್ರೆಸ್ ಮುಖಂಡ ಪವನ್ ಖೇರಾ ಕೂಡಾ "ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಜನ ಮತ ಹಾಕಿಲ್ಲ ಎಂಬ ಕಾರಣಕ್ಕೆ ಅಂಬೇಡ್ಕರ್ ಮತ್ತು ಶಿವಾಜಿ ಪುತ್ಥಳಿಯನ್ನು ಸ್ಥಳಾಂತರಿಸಲಾಗಿದೆ" ಎಂದು ಆಪಾದಿಸಿದ್ದಾರೆ.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News