ಚಂದ್ರನ ಮೇಲ್ಮೈಯ ತಾಣಕ್ಕೆ ಹೆಸರಿಡಲು ಪ್ರಧಾನಿಗೆ ಹಕ್ಕಿಲ್ಲ: ಕಾಂಗ್ರೆಸ್

Update: 2023-08-26 16:32 GMT


Chandrayaan-3's landing site : (twitter \ @isro) | Rashid Alvi : PTI

Read more at: https://www.oneindia.com/lucknow/now-rashid-alvi-offers-to-contest-from-varanasi-writes-to-sonia-gandhi-lse-1421888.html

ಹೊಸದಿಲ್ಲಿ: ಚಂದ್ರಯಾನ 3ರ ವಿಕ್ರಮ್ ಲ್ಯಾಂಡರ್ ನೌಕೆಯು ಚಂದ್ರನ ನೆಲದಲ್ಲಿ ಸಾಫ್ಟ್ಲ್ಯಾಂಡಿಂಗ್ ಆದ ತಾಣವನ್ನು ‘ಶಿವಶಕ್ತಿ ಪಾಯಿಂಟ್’ ಎಂದು ಪ್ರಧಾನಿ ನಾಮಕರಣ ಮಾಡಿರುವ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ಹಗ್ಗಜಗ್ಗಾಟ ನಡೆದಿದೆ.

ಚಂದ್ರನ ಮೇಲ್ಮೈಯ ಸ್ಥಳಕ್ಕೆ ಹೆಸರಿಡಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಯಾವುದೇ ಹಕ್ಕಿಲ್ಲವೆಂದು ಹಿರಿಯ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಟೀಕಿಸಿದ್ದಾರೆ.

‘ಇಡೀ ಜಗತ್ತೇ ನಗುತ್ತಿದೆ. ಚಂದ್ರನ ತಾಣಕ್ಕೆ ನಾಮಕರಣಗೊಳಿಸುವ ಹಕ್ಕನ್ನು ಪ್ರಧಾನಿ ಮೋದಿಗೆ ಯಾರು ನೀಡಿದ್ದಾರೆ?. ನಾವು ಚಂದ್ರನ ನೆಲದಲ್ಲಿ ಇಳಿದಿದ್ದೇವೆ. ತುಂಬಾ ಒಳ್ಳೆಯದು. ಅದರ ಬಗ್ಗೆ ನಮಗೆ ಹೆಮ್ಮೆಯಿದೆ. ಅದರಲ್ಲಿ ಸಂದೇಹವೇ ಇಲ್ಲ. ಆದರೆ ಚಂದ್ರನ ಅಥವಾ ಅದರಲ್ಲಿರುವ ತಾಣದ ಮಾಲಕರು ನಾವಲ್ಲ’’ ಎಂದು ರಶೀದ್ ಅಲ್ವಿ ಅವರು ಟಿವಿ ಚಾನೆಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆಗ ಸಂದರ್ಶಕರು 2008ರಲ್ಲಿ ಭಾರತದ ಮೊದಲ ಚಂದ್ರಯಾತ್ರೆಯಾದ ‘ಚಂದ್ರಯಾನ 1’ರಲ್ಲಿ ನೌಕೆಯು ಚಂದ್ರನ ನೆಲದ ಮೇಲೆ ಬಿದ್ದ ಜಾಗಕ್ಕೆ ಭಾರತದ ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರೂ ಅವರ ಹೆಸರನ್ನು ಇರಿಸಿರುವುದನ್ನು ನೆನಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಲ್ವಿ ಅವರು ಜವಾಹರಲಾಲ್ ನೆಹರೂ ಅವರಿಂದಾಗಿಯೇ ಇಸ್ರೋ ಸಂಸ್ಥೆಯಿದೆ. 1962ರಲ್ಲಿ ವಿಕ್ರಮ ಸಾರಾಭಾಯಿ ಹಾಗೂ ಜವಾಹರಲಾಲ್ ನೆಹರೂ ಅವರು ಇಸ್ರೋ ಸಂಸ್ಥೆಯನ್ನು ಸ್ಥಾಪಿಸಿದ್ದರು. ಹೀಗಾಗಿ ನೆಹರೂ ಅವರನ್ನು ಇಸ್ರೋದ ಸ್ಥಾಪಕರೆಂದು ಹೇಳಬಹುದಾಗಿದೆ. ಆದರೆ ಈಗ ಮೋದಿಯವರು ಇಡೀ ವಿಷಯವನ್ನೇ ರಾಜಕೀಯಗೊಳಿಸುತ್ತಿದ್ದಾರೆ ಎಂದರು.

ರಶೀದ್ ಅಲ್ವಿ ಅವರ ಹೇಳಿಕೆಯನ್ನು ಬಿಜೆಪಿಯ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲಾ ಅವರು ಖಂಡಿಸಿದ್ದಾರೆ. ಕಾಂಗ್ರೆಸ್ ತನ್ನ ಹಿಂದೂ ವಿರೋಧಿ ನಿಲುವನ್ನು ಪ್ರದರ್ಶಿಸಿದೆ ಎಂದವರು ಹೇಳಿದ್ದಾರೆ.

‘‘ಕಾಂಗ್ರೆಸ್ ಪಕ್ಷವು ಶ್ರೀರಾಮನ ಅಸ್ತಿತ್ವವನ್ನು ಪ್ರಶ್ನಿಸುತ್ತಿರುವ ಏಕೈಕ ಪಕ್ಷವಾಗಿದೆ. ಅದು ರಾಮದೇಗುಲ ನಿರ್ಮಾಣವನ್ನು ವಿರೋಧಿಸುತ್ತಿದೆ , ಹಿಂದೂಗಳನ್ನು ನಿಂದಿಸುತ್ತಿದೆ. ಶಿವಶಕ್ತಿ ಪಾಯಿಂಟ್ ಹಾಗೂ ತಿರಂಗಾ ಪಾಯಿಂಟ್ ಇವೆರಡೂ ಹೆಸರುಗಳು ದೇಶದೊಂದಿದೆ ಜೋಡಿಸಲ್ಪಟ್ಟಿದೆ. ಅವನ್ನು ಅಸಂಬದ್ಧವೆಂದು ರಶೀದ್ ಅಲ್ವಿ ಯಾಕೆ ಪರಿಗಣಿಸಬೇಕು?. ಕಾಂಗ್ರೆಸ್ ಪಕ್ಷವು ಕೇವಲ ಗಾಂಧಿ ಕುಟುಂಬ ಹಾಗೂ ಜವಾಹರಲಾಲ್ ನೆಹರೂ ಅವರ ಗುಣಗಾನ ಮಾಡುತ್ತದೆ. ಇಷ್ಟಕ್ಕೂ ವಿಕ್ರಮ ಲ್ಯಾಂಡರ್ಗೆ ವಿಕ್ರಮ ಸಾರಾಭಾಯಿ ಅವರ ಹೆಸರನ್ನೇ ಇರಿಸಲಾಗಿದೆ’’ ಎಂದು ಪೂನಾವಾಲಾ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News