ಕೇಂದ್ರ ಸರಕಾರದ ಜಾಲತಾಣದಿಂದ ಆರ್‌ಟಿಐ ಅರ್ಜಿಗಳು ನಾಪತ್ತೆ; ಮಾಹಿತಿ ಹಕ್ಕು ಕಾರ್ಯಕರ್ತರ ಆರೋಪ
ಹೊಸದಿಲ್ಲಿ: ಮಾಹಿತಿ ಹಕ್ಕು ಕಾಯ್ದೆಯಡಿ ತಾವು ಸಲ್ಲಿಸಿದ್ದ ನೂರಾರು ಅರ್ಜಿಗಳು ಸರಕಾರಿ ಜಾಲತಾಣದಿಂದ ಕಣ್ಮರೆಯಾಗಿವೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರು ಬುಧವಾರ ತಿಳಿಸಿದ್ದಾರೆ.
ಕೇಂದ್ರ ಸರಕಾರದಿಂದ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕಾಗಿ ನಾಗರಿಕರು ಅರ್ಜಿಗಳನ್ನು ಸಲ್ಲಿಸುವ ಆರ್‌ಟಿಐ ಆನ್‌ಲೈನ್ ಜಾಲತಾಣದಲ್ಲಿ ಈ ದಾಖಲೆಗಳು ನಾಪತ್ತೆಯಾಗಿವೆಯೆನ್ನಲಾಗಿದೆ. ಕೇಂದ್ರ ಸಚಿವರು, ಸರಕಾರಿ ಇಲಾಖೆಗಳು, ನಿಯಂತ್ರಣ ಅಧಿಕಾರಿಗಳು, ದೇಶದ ವಿದೇಶಿ ರಾಯಭಾರಿ ಕಚೇರಿಗಳು ಹಾಗೂ ನಿರ್ದಿಷ್ಟ ಕೇಂದ್ರಾಡಳಿತ ಸರಕಾರಗ ಕುರಿತು ಮಾಹಿತಿಗಳನ್ನು ಕೋರಲು ಈ ಜಾಲತಾಣದ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
2013ರಲ್ಲಿ ಆರಂಭಗೊಂಡ ಈ ಪೋರ್ಟಲ್ ಅನ್ನು ರಾಷ್ಟ್ರೀಯ ಇನ್‌ಫಾರ್ಮ್ಯಾಟಿಕ್ಸ್ ಸೆಂಟರ್ ನಿರ್ವಹಿಸುತ್ತಿದೆ.
ತನ್ನ ಆರ್‌ಟಿಐ ಆನ್‌ಲೈನ್ ಖಾತೆಯ ಮೂಲಕ ಸಲ್ಲಿಸಲಾದ ಹಲವಾರು ಅರ್ಜಿಗಳು ಕಾಣದಾಗಿವೆ ಎಂದು ಮಧ್ಯಪ್ರದೇಶದ ಆರ್‌ಟಿಯೇ ಕಾರ್ಯಕರ್ತ ಚಂದ್ರಶೇಖರ ಗೌರ್ ತಿಳಿಸಿದ್ದಾರೆ.
ಡಿಜಿಟಲ್ ಹಕ್ಕುಗಳ ಕಾರ್ಯಕರ್ತ ಶ್ರೀನಿವಾಸ್ ಕೊಡಾಲಿ ಅವರು ಕೂಡಾ ದಾಖಲೆಗಳು ನಾಪತ್ತೆಯಾಗಿರುವುದನ್ನು ದೃಢಪಡಿಸಿದ್ದಾರೆ.
‘‘ಆರ್‌ಟಿಐ ಆನ್‌ಲೈನ್ ಜಾಲತಾಣವನ್ನು ಸರಕಾರವು ಕಳೆದ ಕೆಲವು ತಿಂಗಳುಗಳಿಂದ ನಿಷ್ಕ್ರಿಯಗೊಳಿಸಿದ್ದು ನೂತನ ನೋಂದಣಿಗಳನ್ನು ಸ್ಥಗಿತಗೊಳಿಸಿದೆ ಮತ್ತು ಅರ್ಜಿದಾರರ ಖಾತೆಗಳನ್ನು ಅಳಿಸಿಹಾಕುವ ಎಚ್ಚರಿಕೆಯನ್ನು ಕೂಡಾ ನೀಡಿತ್ತು ಇದೀಗ 2019ಕ್ಕಿಂತ ಮುಂಚಿನ ಎಲ್ಲಾ ಆರ್‌ಟಿಐ ಅರ್ಜಿಗಳನ್ನು ಸರ್ವರ್‌ನಿಂದ ಆಳಿಸಿಹಾಕಲಾಗಿದೆ’’ ಎಂದು ಅವರು ಹೇಳಿದ್ದಾರೆ.
2013ರಿಂದೀಚೆಗೆ, ಆರ್‌ಟಿಐ ಆನ್‌ಲೈನ್ ಜಾಲತಾಣವು 58.3 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಸಂಸ್ಕರಿಸಿದೆ. 2022ರಲ್ಲಿ 12.6 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಈ ಜಾಲತಾಣದಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದರು.