ಕಳಮಶ್ಶೇರಿ ಸ್ಪೋಟಕ್ಕೆ ಐಇಡಿ ಬಳಕೆ, ತನಿಖೆಗೆ ಎಸ್‌ಐಟಿ ರಚನೆ : ಕೇರಳ ಡಿಜಿಪಿ

Update: 2023-10-29 10:51 GMT

Photo- PTI

ಕೊಚ್ಚಿ : ಕಳಮಶ್ಶೇರಿ ಕನ್ವೆನ್ಷನ್ ಸೆಂಟರ್ ಸ್ಫೋಟಕ್ಕೆ ಐಇಡಿ ಬಳಸಲಾಗಿದ್ದು, ತನಿಖೆ ಎಸ್‌ಐಟಿ ರಚಿಸಲಾಗುವುದು ಎಂದು ಕೇರಳ ಡಿಜಿಪಿ ಹೇಳಿದ್ದಾರೆ.

ಈ ಘಟನೆಯಲ್ಲಿ 36 ಮಂದಿ ಗಾಯಗೊಂಡು ಓರ್ವ ಮೃತಪಟ್ಟಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಅವರು ರವಿವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿದ್ದು, ಘಟನೆಯ ಕುರಿತು ತನಿಖೆ ಆರಂಭಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ)ಗೆ ಸೂಚನೆ ನೀಡಿದ್ದಾರೆ ಎಂದು economictimes.indiatimes.com ವರದಿ ಮಾಡಿದೆ.

ಎರ್ನಾಕುಲಂ ಜಿಲ್ಲೆಯ ಕಳಮಶ್ಶೇರಿ ಪ್ರದೇಶದ ಜಮ್ರಾ ಅಂತರಾಷ್ಟ್ರೀಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರದಲ್ಲಿ ಸಂಭವಿಸಿದ ಸ್ಫೋಟಕ್ಕೆ ಬಳಸಿದ ವಸ್ತುಗಳನ್ನು ಸಂಗ್ರಹಿಸಲು ಮತ್ತು ವಿಚಾರಣೆ ಕೈಗೊಳ್ಳಲು ಎನ್‌ಎಸ್‌ಜಿ ಬಾಂಬ್ ನಿಷ್ಕ್ರಿಯ ಘಟಕ ದೆಹಲಿಯಿಂದ ಕೇರಳಕ್ಕೆ ಧಾವಿಸಿದೆ.

ರಾಜ್ಯ ಕೈಗಾರಿಕಾ ಸಚಿವ ಪಿ ರಾಜೀವ್ ಅವರು ಮಾತನಾಡುತ್ತಾ ಸ್ಫೋಟದ ಸ್ಥಳವನ್ನು ನಿರ್ಬಂಧಿಸಲಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳಗಳು ರಕ್ಷಣಾ ಸೇವೆಯಲ್ಲಿ ನಿರತರಾಗಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

10 ಜನರನ್ನು ಕಳಮಶ್ಶೇರಿ ವೈದ್ಯಕೀಯ ಕಾಲೇಜಿನ ಸುಟ್ಟಗಾಯಗಳ ಘಟಕಕ್ಕೆ ದಾಖಲಿಸಲಾಗಿದ್ದು, ಶೇ.50ಕ್ಕೂ ಹೆಚ್ಚು ಸುಟ್ಟ ಗಾಯವಿರುವ ಇಬ್ಬರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್.ಕೆ ಉಮೇಶ್ ತಿಳಿಸಿದ್ದಾರೆ. ಇದಲ್ಲದೆ, ಎಂಟು ಜನರನ್ನು ವೈದ್ಯಕೀಯ ಕಾಲೇಜಿನ ಸಾಮಾನ್ಯ ವಾರ್ಡ್‌ನಲ್ಲಿ ದಾಖಲಿಸಲಾಗಿದೆ ಮತ್ತು ಉಳಿದ 18 ಜನರು ವಿವಿಧ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಘಟನೆಯಲ್ಲಿ ಮೃತಪಟ್ಟ ಮಹಿಳೆಯ ಗುರುತು ಇನ್ನೂ ತಿಳಿದುಬಂದಿಲ್ಲ ಎಂದು ಅವರು ಹೇಳಿದರು.

ಪ್ರಾರ್ಥನೆಯ ಮಧ್ಯೆ ಮೊದಲ ಸ್ಫೋಟ ಸಂಭವಿಸಿದೆ ಎಂದು ಕನ್ವೆನ್ಷನ್ ಸೆಂಟರ್ನಲ್ಲಿದ್ದ ಜನರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News