ಲೋಕಸಭೆಯಲ್ಲಿ ಇಂದು ಮಹಿಳಾ ಮಸೂದೆ ಮೇಲಿನ ಚರ್ಚೆಗೆ ಸೋನಿಯಾ ಗಾಂಧಿ ಚಾಲನೆ ಸಾಧ್ಯತೆ

Update: 2023-09-20 05:12 GMT

Photo: PTI

ಹೊಸದಿಲ್ಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಮೇಲಿನ ಚರ್ಚೆಯನ್ನು ಮೊದಲಿಗೆ ಆರಂಭಿಸುವ ಸಾಧ್ಯತೆಯಿದೆ.

ಐದು ದಿನಗಳ ಕಾಲ ನಡೆಯುವ ಸಂಸತ್ತಿನ ವಿಶೇಷ ಅಧಿವೇಶನದ ಮೂರನೇ ದಿನವಾದ ಇಂದು (ಸೆಪ್ಟೆಂಬರ್ 20) ಮಸೂದೆಯನ್ನು ಚರ್ಚೆಗೆ ತರಲಾಗುತ್ತಿದೆ.

ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಕೋಟಾ ನಿಗದಿಪಡಿಸುವ ಗುರಿಯನ್ನು ಹೊಂದಿರುವ 'ನಾರಿ ಶಕ್ತಿ ವಂದನ್ ಅಧಿನಿಯಮ್'   ಎಂಬ ಮಸೂದೆಯನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ‘ಹೊಸ ಸಂಸತ್ತಿನ ಕಟ್ಟಡದಲ್ಲಿ ಮಂಗಳವಾರ ನಡೆದ ಮೊದಲ ಲೋಕಸಭೆಯ ಅಧಿವೇಶನದಲ್ಲಿ ಮಂಡಿಸಿದರು. ಸಂಸತ್ತಿನ ವಿಶೇಷ ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಅಧಿವೇಶನದ ಎರಡನೇ ದಿನದಂದು ಮಸೂದೆಯನ್ನು ಮಂಡಿಸಲಾಯಿತು.

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವು 2008 ರಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿತ್ತು. ಅದು 2010 ರಲ್ಲಿ ಅಂಗೀಕಾರವಾಯಿತು. ಆದರೆ, ಮಸೂದೆಯು ಪರಿಗಣನೆಗೆ ಲೋಕಸಭೆಗೆ ತಲುಪಲಿಲ್ಲ. 2014 ಹಾಗೂ 2019 ರ ಲೋಕಸಭಾ ಚುನಾವಣೆಗಳ ಪೂರ್ವದಲ್ಲಿ ಬಿಜೆಪಿ ನೀಡಿದ ಪ್ರಮುಖ ಚುನಾವಣಾ ಭರವಸೆಗಳಲ್ಲಿ ಈ ಮಸೂದೆಯೂ ಒಂದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಸರ್ವಾನುಮತದಿಂದ ಅಂಗೀಕರಿಸುವಂತೆ ಒತ್ತಾಯಿಸಿದರು, ಇದು ಭಾರತೀಯ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರತಿಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News