ಮಾನನಷ್ಟ ಮೊಕದ್ದಮೆಯಲ್ಲಿ ವಿಧಿಸಲಾಗಿರುವ ಶಿಕ್ಷೆಗೆ ತಡೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿರುವ ಅರ್ಜಿ ಆಲಿಕೆಗೆ ಸುಪ್ರೀಂ ಸಮ್ಮತಿ
ಹೊಸದಿಲ್ಲಿ: 'ಮೋದಿ ಉಪ ನಾಮದ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯ ತನಗೆ ಶಿಕ್ಷೆ ವಿಧಿಸಿರುವುದನ್ನು ತಡೆಯುವಂತೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ (ಜುಲೈ 21) ಆಲಿಸಲು ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿಸಿದೆ ಎಂದು Live Law ಟ್ವೀಟ್ ಮಾಡಿದೆ.
ಮಾರ್ಚ್ 23, 2023 ರಂದು, ಸೂರತ್ ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರು ಮಾನನಷ್ಟ ಅಪರಾಧಕ್ಕಾಗಿ ರಾಹುಲ್ ಗಾಂಧಿಯವರನ್ನು ತಪ್ಪಿತಸ್ಥರೆಂದು ಪರಿಗಣಿಸಿದರು ಹಾಗೂ ಬಿಜೆಪಿ ನಾಯಕ ಪೂರ್ಣೇಶ್ ಮೋದಿ ಅವರು ದಾಖಲಿಸಿದ ಪ್ರಕರಣದ ಆಧಾರದ ಮೇಲೆ ರಾಹುಲ್ ಅವರಿಗೆ ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ನೀಡಿದ್ದರು. ಈ ಶಿಕ್ಷೆಗೆ ತಡೆಯಾಜ್ಞೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದೆ.
ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯ ನೀಡಿರುವ ತೀರ್ಪಿನಿಂದಾಗಿ ರಾಹುಲ್ ಗಾಂಧಿ ಸಂಸತ್ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಹಾಜರಾದ ಹಿರಿಯ ವಕೀಲ ಎ.ಎಂ. ಸಿಂಘ್ವಿ ಹಾಗೂ ಗಾಂಧಿ ಪರ ವಕೀಲ ಪ್ರಸನ್ನ ಎಸ್., ಪ್ರಕರಣಕ್ಕೆ ತುರ್ತು ವಿಚಾರಣೆ ಅಗತ್ಯವಿದೆ ಎಂದು ಅರ್ಜಿ ಸಲ್ಲಿಸಿದರು.
ನಾವು ಈ ಅರ್ಜಿಯನ್ನು ಶುಕ್ರವಾರ ಕೈಗೆತ್ತಿಕೊಳ್ಲುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.
ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯು 2019 ರಲ್ಲಿ ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ನಡೆದ ರಾಜಕೀಯ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಅವರು ಮೋದಿ" ಉಪನಾಮದ ಕುರಿತ ನೀಡಿದ ಹೇಳಿಕೆಗೆ ಸಂಬಂಧಿಸಿದೆ.