ಶಾಂತಿನಿಕೇತನದ ಯುನೆಸ್ಕೊ ಟ್ಯಾಗ್ ಫಲಕದಲ್ಲಿ ಠಾಗೋರ್ ಹೆಸರು ನಾಪತ್ತೆ!

Update: 2023-10-22 05:08 GMT

ಹೊಸದಿಲ್ಲಿ: ವಿಶ್ವಭಾರತಿ ವಿಶ್ವವಿದ್ಯಾನಿಲಯ ಕ್ಯಾಂಪಸ್ ನಲ್ಲಿ ಅಳವಡಿಸಲಾಗಿರುವ ಶಾಂತಿನಿಕೇತನ ವಿಶ್ವ ಪಾರಂಪರಿಕ ತಾಣ ಎಂಬ ಫಲಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕುಲಪತಿ ಬಿದ್ಯುತ್ ಚಕ್ರಬರ್ತಿ ಅವರ ಹೆಸರುಗಳು ಮಾತ್ರ ಕಾಣುತ್ತಿದ್ದು, ಈ ವಿಶ್ವವಿದ್ಯಾನಿಲಯದ ಸಂಸ್ಥಾಪಕ, ನೊಬೆಲ್ ಪುರಸ್ಕೃತ ರಬೀಂದ್ರನಾಥ್ ಠಾಗೋರ್ ಅವರ ಹೆಸರು ಫಲಕದಲ್ಲಿ ಇಲ್ಲದಿರುವುದು ವಿವಾದಕ್ಕೆ ಕಾರಣವಾಗಿದೆ.

ಒಂದು ಶತಮಾನಕ್ಕೂ ಹಿಂದೆ ವಿಶ್ವಭಾರತಿಯನ್ನು ನಿರ್ಮಿಸಿದ ಶಾಂತಿನಿಕೇತನ ಪಟ್ಟಣವನ್ನು ಕಳೆದ ಸೆಪ್ಟೆಂಬರ್ನಲ್ಲಿ ವಿಶ್ವಪರಂಪರೆಯ ತಾಣ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಪಶ್ಚಿಮ ಬಂಗಾಳದ ಏಕೈಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಹಾಗೂ ಪ್ರಧಾನಿ ನರೇಂದ್ರ ಮೋದಿ, ಕುಲಪತಿ ಚಕ್ರಬರ್ತಿಯವರ ಹೆಸರು ಮಾತ್ರ ಫಲಕದಲ್ಲಿದೆ.

"ಶಾಂತಿನಿಕೇತನವನ್ನು ವಿಶ್ವ ಪರಂಪರಾ ತಾಣವಾಗಿ ಘೋಷಿಸುವ ವೇಳೆ ಯುನೆಸ್ಕೊ ಸ್ಪಷ್ಟವಾಗಿ, ನಾವು ರವೀಂದ್ರನಾಥ ಠಾಗೋರ್ ಮತ್ತು ಅವರ ವಿಶಿಷ್ಟ ಪರಂಪರೆಯನ್ನು ಗೌರವಿಸುತ್ತಿರುವುದಾಗಿ ಹೇಳಿತ್ತು. ಆತ್ಮವೈಭವದ ಕುಲಪತಿ ಹಾಗೂ ಅವರ ಬಾಸ್ ಯುನೆಸ್ಕೊ ತಮ್ಮನ್ನು ಗೌರವಿಸಿದೆ ಎಂದುಕೊಂಡಿದ್ದಾರೆ" ಎಂಬುದಾಗಿ ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜವಾಹರ್ ಸಿರ್ಕಾರ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ಈ ಫಲಕದ ಚಿತ್ರವನ್ನೂ ಸರ್ಕಾರ್ ಅಪ್ಲೋಡ್ ಮಾಡಿದ್ದಾರೆ.

ವಿವಿ ಕ್ಯಾಂಪಸ್ ನಲ್ಲಿ ಇಂತಹ ಕನಿಷ್ಠ ಮೂರು ಫಲಕಗಳನ್ನು ಅಳವಡಿಸಲಾಗಿದ್ದು, ಯಾವುದರಲ್ಲೂ ಠಾಗೋರ್ ಅವರ ಹೆಸರಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ಸಂಬಂಧ ಕರೆಗಳನ್ನು ಚಕ್ರಬರ್ತಿ ಸ್ವೀಕರಿಸಿಲ್ಲ.

ಈ ಬಗ್ಗೆ ಠಾಗೋರ್ ಅವರ ಮರಿಮೊಮ್ಮಗ ಕೂಡಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನಾನು ಈಗ ಶಾಂತಿನಿಕೇತನದಲ್ಲಿಲ್ಲ. ಆದರೆ ಈ ಸುದ್ದಿ ನನ್ನ ಗಮನಕ್ಕೆ ಬಂದಿದೆ. ಪ್ರಸ್ತುತ ಆಡಳಿತ ಠ್ಯಾಗೋರ್ ಹೆಸರು ಮತ್ತು ವಿಶ್ವಭಾರತಿಯನ್ನು ಅಳಿಸಲು ಪ್ರಯತ್ನ ಮಾಡಿದಂತಿದೆ" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಪ್ರತಿಭಟನೆ ನಡೆಯಬೇಕು ಹಾಗೂ ಹೀಗೆ ಮಾಡಿದವರಿಗೆ ಪಾಠ ಕಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News