ಜೆ ಎನ್ ಯು ವಿದ್ಯಾರ್ಥಿಗಳ ಉಪವಾಸ ಸತ್ಯಾಗ್ರಹ | ಇಬ್ಬರು ಅಸ್ವಸ್ಥ, ಚಿಕಿತ್ಸೆ ಪಡೆಯಲು ನಿರಾಕರಣೆ
ಹೊಸದಿಲ್ಲಿ : ವಿದ್ಯಾರ್ಥಿ ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಲ್ಲಿಯ ಜವಾಹರಲಾಲ್ ನೆಹರು ವಿವಿ (ಜೆ ಎನ್ ಯು) ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವು ಸೋಮವಾರ ಎಂಟನೇ ದಿನಕ್ಕೆ ಕಾಲಿರಿಸಿದ್ದು, ಅಸ್ವಸ್ಥಗೊಂಡಿರುವ ಇಬ್ಬರು ವಿದ್ಯಾರ್ಥಿಗಳನ್ನು ಏಮ್ಸ್ಗೆ ದಾಖಲಿಸಲಾಗಿದೆ. ಆದರೆ ತಮ್ಮ ಪ್ರತಿಭಟನೆಯನ್ನು ಮುಂದುವರಿಸಲು ನಿರ್ಧರಿಸಿರುವ ಅಸ್ವಸ್ಥ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯಲು ನಿರಾಕರಿಸಿದ್ದಾರೆ.
ಅಂಕ ಆಧರಿತ ವಿದ್ಯಾರ್ಥಿ ವೇತನವನ್ನು ಕನಿಷ್ಠ 5,000 ರೂ.ಗೆ ಹೆಚ್ಚಿಸಬೇಕು,ಫೆಬ್ರವರಿಯಲ್ಲಿ ಉದ್ಘಾಟನೆಗೊಂಡಿದ್ದರೂ ಕಾರ್ಯ ನಿರ್ವಹಿಸದ ಬರಾಕ್ ಹಾಸ್ಟೆಲನ್ನು ವಿದ್ಯಾರ್ಥಿಗಳಿಗೆ ಮುಕ್ತಗೊಳಿಸಬೇಕು ಮತ್ತು ಕ್ಯಾಂಪಸ್ ನೊಳಗೆ ಪ್ರತಿಭಟನೆ ನಡೆಸಿದರೆ 20,000 ರೂ.ವರೆಗೆ ದಂಡ ವಿಧಿಸಲು ಅವಕಾಶ ನೀಡಿರುವ ಮುಖ್ಯ ಶಿಸ್ತು ಪಾಲನಾಧಿಕಾರಿ ಕಚೇರಿಯ ಕೈಪಿಡಿಯನ್ನು ಹಿಂದೆಗೆದುಕೊಳ್ಳಬೇಕು ಎಂಬ ಬೇಡಿಕೆಗಳನ್ನು ಮುಂದಿರಿಸಿ ವಿದ್ಯಾರ್ಥಿಗಳು ಆ.11ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಅಸ್ವಸ್ಥಗೊಂಡಿರುವ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಚಿಕಿತ್ಸೆಯನ್ನು ನಿರಾಕರಿಸುವ ಮೂಲಕ ತಮ್ಮ ಹೊಣೆಯನ್ನು ತಾವೇ ಹೊತ್ತುಕೊಂಡಿದ್ದಾರೆ. ವಯಸ್ಕರಾಗಿರುವ ಅವರು ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಿರುವುದರಿಂದ ಜೆ ಎನ್ ಯು ಆಡಳಿತವು ಅವರ ಹೆತ್ತವರಿಗೆ ಮಾಹಿತಿಯನ್ನು ನೀಡಿದೆ ಎಂದು ಕುಲಪತಿ ಶಾಂತಿ ಶ್ರೀ ಡಿ.ಪಂಡಿತ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.