ಶಾಸಕರ ಮೇಲಿನ ದ್ವೇಷದಿಂದ ಅಮಾನತು ಮಾಡಿಲ್ಲ: ಯು.ಟಿ. ಖಾದರ್

ಬೆಂಗಳೂರು: ‘ಶಾಸಕರ ಮೇಲಿನ ಯಾವುದೋ ಕೋಪ, ದ್ವೇಷದಿಂದ ಅಮಾನತು ಮಾಡಿಲ್ಲ, ಬದಲಿಗೆ ಸ್ಪೀಕರ್ ಪೀಠಕ್ಕೆ ಅಗೌರವವನ್ನುಂಟು ಮಾಡಿದ್ದರಿಂದ ಶಾಸಕರನ್ನು ಅಮಾನತ್ತು ಮಾಡಿದ್ದೇನೆ’ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನಕ್ಕಿಂತ ದೊಡ್ಡದು ಯಾವುದೂ ಇಲ್ಲ. ಸದನದಲ್ಲಿ ಅಧ್ಯಕ್ಷರ ಪೀಠಕ್ಕಿಂತ ದೊಡ್ಡವರು ಯಾರೂ ಇಲ್ಲ. ಶಾಸಕರು ಜನರಿಂದ ಆಯ್ಕೆಯಾಗಿ ಬಂದಿದ್ದಾರೆಂಬುದು ಗೊತ್ತಿದೆ. ಆದರೆ, ಅದಕ್ಕೆ ತಕ್ಕ ಹಾಗೆ ಶಾಸಕರು ನಡೆದುಕೊಳ್ಳಬೇಕಲ್ಲವೇ?. ಪೀಠಕ್ಕೆ ಅಗೌರವ ತಂದಿದ್ದನ್ನು ಸಹಿಸಲು ಸಾಧ್ಯವಿಲ್ಲ ಎಂದು ನುಡಿದರು.
‘ತಾವು ತಪ್ಪು ಮಾಡಿದ್ದೇವೆ ಎಂಬ ಭಾವನೆಯಾದರೂ ಶಾಸಕರಿಗೆ ಬರಬೇಕಿತ್ತು. ತಪ್ಪಿನ ಅರಿವು ಸ್ವಲ್ಪವಾದರೂ ಇರಬೇಕಿತ್ತಲ್ಲವೇ?, ಮತ್ತೆ ಸದನ ಆರಂಭವಾದ ಮೇಲೂ ಹಾಗೆಯೇ ಅಶಿಸ್ತಿನ ವರ್ತನೆ ತೋರಿಸಿದರು. ಸದನದಲ್ಲಿ ಹೀಗೆ ಮಾಡುವ ಶಾಸಕರು ನಾಳೆ ಜಿಲ್ಲಾ ಮಟ್ಟದ ಸಭೆಗಳಲ್ಲೂ ಹೀಗೆಯೇ ಮಾಡಿದರೆ ಹೇಗೆ? ಎಂದು ಯು.ಟಿ.ಖಾದರ್ ಪ್ರಶ್ನಿಸಿದರು.
ಕಾನೂನು ಹೋರಾಟ ಮಾಡುವುದು ಶಾಸಕರಿಗೆ ಬಿಟ್ಟ ವಿಚಾರ. ಅದಕ್ಕೆ ನಾನೇನೂ ಹೇಳಲಾಗದು. ಆದರೆ, ಶಾಸಕರಿಗೆ ಅರ್ಥ ಆಗಬೇಕು. ಈಗ ಆರು ತಿಂಗಳು ಅಮಾನತಾಗಿದೆ. ಹೀಗೇ ಆದರೆ, ಒಂದು ವರ್ಷ ಅಮಾನತಾಗಬೇಕಾಗುತ್ತದೆ ಎಂಬುದು ಅರ್ಥವಾಗಬೇಕು ಎಂದು ಯು.ಟಿ.ಖಾದರ್ ಹೇಳಿದರು.
ಅಮಾನತುಗೊಂಡ ಶಾಸಕರಿಗೆ ಅದು ಶಿಕ್ಷೆ ಅಂತಲ್ಲ, ಮುಂದಿನ ದಿನಗಳಲ್ಲಿ ಅತ್ಯುತ್ತಮ ಜನಪ್ರತಿನಿಧಿಯಾಗಿ ತಿದ್ದಿಕೊಳ್ಳಬೇಕು. ಪೀಠದಲ್ಲಿ ಅಮಾನತಿನ ನಿರ್ಧಾರ ಕೊಟ್ಟಾಗಿದೆ, ಅದನ್ನು ಹಿಂಪಡೆಯುವ ಯಾವುದೇ ಪ್ರಸ್ತಾಪವಿಲ್ಲ. 18 ಬಿಜೆಪಿ ಶಾಸಕರು ಮನವಿ ಮಾಡಿಕೊಂಡರೆ ಮುಂದಿನ ನಿರ್ಧಾರ ಮಾಡುತ್ತೇನೆ ಎಂದು ಯು.ಟಿ.ಖಾದರ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮಂಡಿನೋವು ಇದೆ ಎಂಬುದು ಗೊತ್ತಿದ್ದೂ ವಿಪಕ್ಷ ಸದಸ್ಯರು ಪ್ರತಿಯೊಂದಕ್ಕೂ ಅಡ್ಡಿಪಡಿಸುವುದು ಸರಿ ಅನಿಸುತ್ತದೆಯೇ?, ಧನ ವಿನಿಯೋಗ ವಿಧೇಯಕ ಅಂಗೀಕಾರವಾಗಲೇ ಬಾರದೆಂದು ಮನಃಸ್ಥಿತಿ ಇಟ್ಟುಕೊಳ್ಳುವುದು ಸರಿಯೇ?, ಧನ ವಿನಿಯೋಗ ವಿಧೇಯಕ ಅಂಗೀಕಾರ ಆಗದೇ ಇದ್ದರೆ ಎಲ್ಲರಿಗೂ ಸಮಸ್ಯೆ ಅಲ್ಲವೇ?, ಎಷ್ಟೇ ಗೊಂದಲ ಇದ್ದರೂ ನಾನು ಧನ ವಿನಿಯೋಗ ವಿಧೇಯಕ ನಿಲ್ಲಿಸಿಲ್ಲ. ಅದಕ್ಕೆ ವಿಧೇಯಕ ಹರಿದು ಮುಖಕ್ಕೆ ಬಿಸಾಡುವುದು, ಪೇಪರ್ ಬಂಡಲ್ ಅನ್ನೇ ಮುಖಕ್ಕೆ ಎಸೆಯುವುದು ಸರಿಯೇ?, ಸಂವಿಧಾನಕ್ಕೆ ಗೌರವ ತರುವಂಥದ್ದು ಎಲ್ಲರ ಕರ್ತವ್ಯ ಎಂದು ಯು.ಟಿ.ಖಾದರ್ ತಿಳಿಸಿದರು.
ಹನಿಟ್ರ್ಯಾಪ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ‘ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸದನದಲ್ಲಿ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪಿಸಿದರು. ಇದಕ್ಕೆ ಗೃಹ ಸಚಿವರೂ ಉತ್ತರ ಕೊಟ್ಟರು. ಎಲ್ಲರೂ ಒಗ್ಗಟ್ಟಿನಿಂದ ಸರಕಾರಕ್ಕೆ ತನಿಖೆಗೆ ಕೇಳಿದ್ದಾರೆ. ಅರ್ಧಗಂಟೆ ಚರ್ಚೆ ಬಳಿಕ ಗೃಹ ಸಚಿವರೇ ದೂರು ಬಂದ ಮೇಲೆ ತನಿಖೆ ಮಾಡುತ್ತೇವೆ ಎಂದು ಉತ್ತರ ನೀಡಿದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎರಡು ಬಾರಿ ಉತ್ತರ ಕೊಟ್ಟಿದ್ದಾರೆ. ಇಷ್ಟೆಲ್ಲ ಉತ್ತರ ಕೊಟ್ಟ ಮೇಲೂ ಪ್ರತಿಪಕ್ಷ ಅಡ್ಡಿ ಪಡಿಸಿದರು ಎಂದರು.
ವಿಧಾನಸೌಧಕ್ಕೆ ಶಾಶ್ವತ ದೀಪಾಲಂಕಾರ:
‘ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರ ಕಾಮಗಾರಿ ಆರಂಭಗೊಂಡಿದ್ದು, ಬಹುತೇಕ ಪೂರ್ಣಗೊಂಡಿದೆ. ಎಪ್ರಿಲ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ದೀಪಾಲಂಕಾರಕ್ಕೆ 5ಕೋಟಿ ರೂ.ವೆಚ್ಚವಾಗುತ್ತಿದೆ. ಪ್ರತಿ ಶನಿವಾರ, ರವಿವಾರ ಸಂಜೆ 6.30ಕ್ಕೆ ದೀಪಾಲಂಕಾರ ಮಾಡಲಾಗುತ್ತದೆ. ರಾಷ್ಟ್ರೀಯ ಹಬ್ಬಗಳ ಸಂದರ್ಭಗಳಲ್ಲಿ ವಿದ್ಯುತ್ ದೀಪಾಲಂಕಾರವಿರುತ್ತದೆ. ಇದರಿಂದ ಜನರಿಗೆ ವಿಧಾನಸೌಧ ವೀಕ್ಷಣೆ ಮಾಡಲು ಅನುಕೂಲವಾಗುತ್ತದೆ’
-ಯು.ಟಿ.ಖಾದರ್ ಸ್ಪೀಕರ್
ಸುವರ್ಣಸೌಧದಲ್ಲೂ ಪುಸ್ತಕ ಮೇಳ ಚಿಂತನೆ:
‘ಮೊದಲ ಬಾರಿಗೆ ವಿಧಾನಸೌಧದ ಆವರಣದಲ್ಲಿ ಆಯೋಜಿಸಿದ್ದ ಪುಸ್ತಕ ಮೇಳಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಬೆಳಗಾವಿಯ ಸುವರ್ಣಸೌಧದಲ್ಲೂ ಪುಸ್ತಕ ಮೇಳ ಮಾಡಬೇಕೆಂಬ ಚಿಂತನೆ ಇದೆ. ಜೊತೆಗೆ, ಬೆಳಗಾವಿಯಲ್ಲಿ ಪ್ರತಿವರ್ಷ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಮುಖ್ಯಮಂತ್ರಿ, ಸಚಿವರು, ಶಾಸಕರು, ಅಧಿಕಾರಿಗಳ ವಾಸ್ತವ್ಯಕ್ಕೆ ಅನುಕೂಲವಾಗುವ ಬಹುಪಯೋಗಿ ಕಟ್ಟಡವನ್ನು ನಿರ್ಮಿಸುವ ಉದ್ದೇಶವಿದೆ. ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದ ಮಾದರಿಯಲ್ಲಿ 300ಕೊಠಡಿಗಳ ಶಾಸಕರ ಭವನ ನಿರ್ಮಿಸುವ ಉದ್ದೇಶವಿದೆ. ಈ ಬಗ್ಗೆ ಲೋಕೋಪಯೋಗಿ ಹಾಗೂ ಪ್ರವಾಸೋದ್ಯಮ ಸಚಿವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪೀಕರ್ ಖಾದರ್ ಮಾಹಿತಿ ನೀಡಿದರು.