ಅರುಂಧತಿ ರಾಯ್,ಶೌಕತ್ ಹುಸೇನ್ ವಿರುದ್ಧದ ಯುಎಪಿಎ ಪ್ರಕರಣಗಳನ್ನು ಕೈಬಿಡಿ : ಭಾರತೀಯ ಅಧಿಕಾರಿಗಳಿಗೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿ ಆಗ್ರಹ

Update: 2024-06-29 12:20 GMT

PC : maktoobmedia.com (ಕಾಶ್ಮೀರದ ಕೇಂದ್ರೀಯ ವಿವಿಯ ಮಾಜಿ ಪ್ರೊಫೆಸರ್ ಶೇಖ್ ಶೌಕತ್ ಹುಸೇನ್  ಮತ್ತು  ಲೇಖಕಿ ಅರುಂಧತಿ ರಾಯ್  )

ಹೊಸದಿಲ್ಲಿ,ಜೂ.29: 2010ರಲ್ಲಿ ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದ್ದ ಆರೋಪದಲ್ಲಿ ಲೇಖಕಿ ಅರುಂಧತಿ ರಾಯ್ ಮತ್ತು ಕಾಶ್ಮೀರದ ಕೇಂದ್ರೀಯ ವಿವಿಯ ಮಾಜಿ ಪ್ರೊಫೆಸರ್ ಶೇಖ್ ಶೌಕತ್ ಹುಸೇನ್ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ದಾಖಲಾಗಿರುವ ಪ್ರಕರಣಗಳನ್ನು ಕೈಬಿಡುವಂತೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿ(ಯುಎನ್ಎಚ್ಆರ್ಒ)ಯು ಭಾರತೀಯ ಅಧಿಕಾರಿಗಳನ್ನು ಆಗ್ರಹಿಸಿದೆ.

ಜೂ.14ರಂದು ದಿಲ್ಲಿಯ ಲೆಫ್ಟಿನಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಯುಎಪಿಎ ಕಲಂ 13ರಡಿ ರಾಯ್ ಮತ್ತು ಹುಸೇನ್ ವಿರುದ್ಧ ಕಾನೂನು ಕ್ರಮಕ್ಕೆ ಅನುಮೋದನೆಯನ್ನು ನೀಡಿದ್ದರು. ಕಾಯ್ದೆಯ ಈ ಕಲಂ ಅಡಿ ಅಪರಾಧಕ್ಕೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು.

‘ಟೀಕಾಕಾರರ ಧ್ವನಿಯನ್ನಡಗಿಸಲು ಭಯೋತ್ಪಾದನೆ ನಿಗ್ರಹ ಕಾನೂನು ಯುಎಪಿಎ ಬಳಕೆಯಾಗುತ್ತಿರುವುದು ನಮಗೆ ಕಳವಳವನ್ನುಂಟು ಮಾಡಿದೆ ’ ಎಂದು ಹೈಕಮಿಷನರ್ ವೋಕರ್ ಟರ್ಕ್ ನೇತೃತ್ವದ ಯುಎನ್ಎಚ್ಆರ್ಒ ಎಕ್ಸ್ ಪೋಸ್ಟ್ನಲ್ಲಿ ಹೇಳಿದೆ.‘ಕಾನೂನಿನ ಪುನರ್ಪರಿಶೀಲನೆ ಮತ್ತು ಅದರಡಿ ಬಂಧಿತ ಮಾನವ ಹಕ್ಕು ಹೋರಾಟಗಾರರ ಬಿಡುಗಡೆಗೆ ಕರೆಯನ್ನು ಪುನರುಚ್ಚರಿಸುತ್ತಿದೇವೆ. ಭಾರತ ಆಡಳಿತದ ಕಾಶ್ಮೀರ ಕುರಿತು ಟೀಕೆಗಳಿಗಾಗಿ ರಾಯ್ ಮತ್ತು ಹುಸೇನ್ ವಿರುದ್ಧದ ಪ್ರಕರಣಗಳನ್ನು ಕೈಬಿಡುವಂತೆ ನಾವು ಅಧಿಕಾರಿಗಳನ್ನು ಆಗ್ರಹಿಸುತ್ತಿದ್ದೇವೆ ’ಎಂದೂ ಪೋಸ್ಟ್ನಲ್ಲಿ ಹೇಳಲಾಗಿದೆ.

ಕಾಶ್ಮೀರದ ಸಾಮಾಜಿಕ ಕಾರ್ಯಕರ್ತ ಎನ್ನಲಾಗಿರುವ ಸುಶೀಲ ಪಂಡಿತ್ 2010,ಅ.28ರಂದು ಸಲ್ಲಿಸಿದ್ದ ದೂರಿನ ಆಧಾರದಲ್ಲಿ ರಾಯ್ ಮತ್ತು ಹುಸೇನ್ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ರಾಜಕೀಯ ಕೈದಿಗಳ ಬಿಡುಗಡೆಗಾಗಿ ಸಮಿತಿಯು 2010,ಅ.21ರಂದು ‘ಆಜಾದಿ:ದಿ ಓನ್ಲಿ ವೇ’ ಬ್ಯಾನರ್ನಡಿ ಆಯೋಜಿಸಿದ್ದ ಸಮ್ಮೇಳನದಲ್ಲಿ ವಿವಿಧ ಭಾಷಣಕಾರರು ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದ ಪಂಡಿತ್,ಸಮ್ಮೇಳನದಲ್ಲಿ ಚರ್ಚೆಯಾಗಿದ್ದ ವಿಷಯಗಳು ಭಾರತದಿಂದ ಕಾಶ್ಮೀರದ ಪ್ರತ್ಯೇಕತೆಗೆ ಸಂಬಂಧಿಸಿದ್ದವು ಮತ್ತು ಇದು ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡಬಹುದು ಎಂದು ಹೇಳಿದ್ದರು.

ಕಾಶ್ಮೀರವು ಎಂದಿಗೂ ಭಾರತದ ಭಾಗವಾಗಿರಲಿಲ್ಲ ಮತ್ತು ಭಾರತದ ಸಶಸ್ತ್ರ ಪಡೆಗಳು ಅದನ್ನು ಬಲವಂತದಿಂದ ಆಕ್ರಮಿಸಿದ್ದವು. ಜಮ್ಮು-ಕಾಶ್ಮೀರ ರಾಜ್ಯವನ್ನು ಭಾರತದಿಂದ ಸ್ವತಂತ್ರಗೊಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ರಾಯ್ ತನ್ನ ಭಾಷಣದಲ್ಲಿ ಹೇಳಿದ್ದಾರೆ ಎಂದು ಪಂಡಿತ್ ದೂರಿನಲ್ಲಿ ಆರೋಪಿಸಿದ್ದರು.

ಯುಎನ್ಎಚ್ಆರ್ಒ ಅಲ್ಲದೆ 200ಕ್ಕೂ ಅಧಿಕ ಭಾರತೀಯ ಶಿಕ್ಷಣ ತಜ್ಞರು,ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರೂ ಪ್ರಕರಣಗಳನ್ನು ಹಿಂದೆಗೆದುಕೊಳ್ಳುವಂತೆ ಕೇಂದ್ರವನ್ನು ಆಗ್ರಹಿಸಿ ಜೂ.21ರಂದು ಜಂಟಿಯಾಗಿ ಬಹಿರಂಗ ಪತ್ರವನ್ನು ಬರೆದಿದ್ದರು.

ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ರಾಯ್ ಮತ್ತು ಹುಸೇನ್ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಿದ ಸಕ್ಸೇನಾರ ಕ್ರಮವನ್ನು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಪ್ರತಿಪಕ್ಷ ನಾಯಕರೂ ಟೀಕಿಸಿದ್ದಾರೆ.

ನೋಬೆಲ್ ಪ್ರಶಸ್ತಿ ಪುರಸ್ಕೃತ ನಾಟಕಕಾರ ಹೆರಾಲ್ಡ್ ಪಿಂಟರ್ ಅವರ ಸ್ಮರಣಾರ್ಥ ಮಾನವ ಹಕ್ಕುಗಳ ಸಂಸ್ಥೆ ಇಂಗ್ಲಿಷ್ ಪೆನ್ 2009ರಲ್ಲಿ ಸ್ಥಾಪಿಸಿದ ಪಿಂಟರ್ ಪ್ರಶಸ್ತಿಯನ್ನು ಗುರುವಾರ ರಾಯ್ ಅವರಿಗೆ ಘೋಷಿಸಲಾಗಿದೆ. ಅವರು 2024,ಅ.10ರಂದು ಬ್ರಿಟಿಷ್ ಲೈಬ್ರರಿ ಸಹ ಆತಿಥ್ಯದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News